ಡಿ.9 ರಂದು ತಾಳಿಕೋಟೆಯಲ್ಲಿ ಬೃಹತ್ ಹೋರಾಟ

A.S. Patila Nadahalli, Togari Crop Damage, Bad Seed, Talikote, North Karnataka, Muddebihala, Bharatiya Janata Party, Vitthala Mandir, Insurance Company, District Collector, Lokayukta,
ತಾಳಿಕೋಟೆ ಪಟ್ಟಣದ ವಿಠ್ಠಲ ಮಂದಿರ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಮಾತನಾಡಿದರು. ಬಸನಗೌಡ ಮಾಡಗಿ, ಎಂ.ಎಸ್.ಪಾಟೀಲ, ಕಾಶಿನಾಥ ಮುರಾಳ ಇತರರಿದ್ದರು.
Published on

ತಾಳಿಕೋಟೆ: ಉತ್ತರ ಕರ್ನಾಟಕ ಭಾಗದಲ್ಲಿಯೇ ರೈತರ ವಾಣಿಜ್ಯ ಬೆಳೆಯಾದ ತೊಗರಿ ಬೆಳೆ ಬೀಜ ಶೇ.80 ರಷ್ಟು ಕಳಪೆಯಾಗಿ ಹಾನಿ ಉಂಟಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ಡಿ.9 ರಂದು ತಾಳಿಕೋಟೆ ನಗರದಲ್ಲಿ ಅಂದಾಜು 15 ಸಾವಿರ ರೈತರನ್ನು ಒಗ್ಗಡಿಸಿ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಹೇಳಿದರು.

ಪಟ್ಟಣದ ವಿಠ್ಠಲ ಮಂದಿರ ಸಭಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಡಿ.3 ರಂದು ಮುದ್ದೇಬಿಹಾಳದಲ್ಲಿ ತೊಗರಿ ಬೆಳೆ ಹಾನಿ ಪರಿಹಾರಕ್ಕಾಗಿ ನಡೆಸಿದ ಹೋರಾಟದ ವೇಳೆ ಅಧಿಕಾರಿಗಳು ಹಾನಿಯ ಬಗ್ಗೆ ಸರ್ವೇ ಮಾಡಲು ಕಾಲಾವಕಾಶ ಕೇಳಿದ್ದು, ಕಾಲಾವಕಾಶ ಮುಗಿಯುತ್ತ ಬಂದರೂ ಇನ್ನೂ ಸರ್ವೇ ಕಾರ್ಯ ಪ್ರಾರಂಭಿಸಿಲ್ಲ. ವಿಮಾ ಕಂಪನಿಯವರಿಂದಲೂ ಸರ್ವೇ ಮಾಡಿಸುತ್ತಿಲ್ಲ ಎಂದು ಆರೋಪಿಸಿದರು.

ಹೋರಾಟದಲ್ಲಿ ಸಾವಿರಾರು ಟ್ರಾೃಕ್ಟರ್ ಜತೆಗೆ ರೈತರು ಪಾಲ್ಗೊಳ್ಳುವರು. ಜಿಲ್ಲಾಧಿಕಾರಿ ಬಂದು ಸರ್ವೇ ಕಾರ್ಯಕ್ಕೆ ಆದೇಶ ಮಾಡುವವರೆಗೂ ಹೋರಾಟ ಮುಂದುವರಿಯಲಿದೆ. ಈ ಹೋರಾಟದ ಬಗ್ಗೆ ಅಧಿವೇಶನದಲ್ಲಿ ಗಮನ ಸೆಳೆಯುವಂತಹ ಕೆಲಸವನ್ನು ಉತ್ತರ ಕರ್ನಾಟಕ ಭಾಗದ ಶಾಸಕರು ಮಾಡಲಿದ್ದಾರೆ ಎಂದರು.

8 ರಿಂದ 10 ಸಾವಿರ ಕೇಸ್ ದಾಖಲು: ಡಿ.9 ರಿಂದ ಹೊಸ ಅಭಿಯಾನ ಪ್ರಾರಂಭವಾಗಲಿದೆ. ಕಳಪೆ ಬೀಜ ವಿತರಣೆಯ ಬಗ್ಗೆ ಜಿಲ್ಲಾಧಿಕಾರಿ, ಕೃಷಿ ಇಲಾಖೆಯ ಜೆಡಿ ಹಾಗೂ ಬೀಜ ಪೂರೈಸಿದ ಖಾಸಗಿ ಕಂಪನಿಗಳ ವಿರುದ್ಧ ಲೋಕಾಯುಕ್ತರ ಬಳಿ ಪ್ರತ್ಯೇಕವಾಗಿ ಕೇಸ್‌ಗಳನ್ನು ದಾಖಲಿಸುವ ಕಾರ್ಯ ನಡೆಯಲಿದೆ. 8 ರಿಂದ 10 ಸಾವಿರ ರೈತರು ಪ್ರತ್ಯೇಕವಾಗಿ ಕೇಸ್ ದಾಖಲಿಸಲಿದ್ದಾರೆ ಎಂದು ಮಾಜಿ ಶಾಸಕ ನಡಹಳ್ಳಿ ಹೇಳಿದರು.

ರೈತರ‌್ಯಾರೂ ಮೂರ್ಖರಲ್ಲ: ತೊಗರಿಗೆ ತೇವಾಂಶ ಕೊರತೆಯಾಗಿದೆ ಎಂದು ವಿಜ್ಞಾನಿಯೊಬ್ಬರು ಇಂಡಿಯಲ್ಲಿ ಹೇಳಿದ್ದಾರೆ. ತೊಗರಿ ಇಕ್ಕಲವಾಗಿ ಬಿತ್ತಿದ್ದರಿಂದ ಗಿಡಗಳಿಗೆ ಉಸಿರಾಟದ ತೊಂದರೆಯಾಗಿ ಹೀಗಾಗಿದೆ ಎಂದು ರೈತರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ. ಅಂದಾಜು 60 ವರ್ಷಗಳಿಂದಲೂ ನಮ್ಮ ರೈತರು ತೊಗರಿ ಬಿತ್ತನೆ ಮಾಡುತ್ತ ಬಂದಿದ್ದಾರೆ. ರೈತರಿಗಿಂತ ಈ ವಿಜ್ಞಾನಿ ಶ್ಯಾಣೆ ಆಗಲು ಹೋಗಿದ್ದಾನೆ. ತೊಗರಿ ಗಿಡದಲ್ಲಿ ಕಾಯಿ ಮೇಲೆ ಆಗುತ್ತವೆ, ಗಾಳಿ ಬೀಸುತ್ತದೆ. ಆದರೆ ಈ ವಿಜ್ಞಾನಿ ಕಾಯಿ ಕೆಳಗ ಆಗುತ್ತದೆ ಎಂದು ತಿಳಿದು ಹೇಳಿರಬಹುದೆಂದು ವಿಜ್ಞಾನಿಯೊಬ್ಬರ ಹೇಳಿಕೆಗೆ ನಡಹಳ್ಳಿ ಅವರು ವ್ಯಂಗ್ಯವಾಡಿದರು. ಕಳಪೆ ಬೀಜ ಸರಬರಾಜು ಮಾಡುವ ದೊಡ್ಡ ಮಾಫಿಯಾ ರಾಜ್ಯದಲ್ಲಿದ್ದು, ಅಂಥವರಿಂದ ಕೋಟ್ಯಂತರ ರೂಪಾಯಿ ಲೂಟಿ ಹೊಡೆದ ಅಧಿಕಾರಿಗಳು ಅಂತಹ ಖಾಸಗಿ ಕಂಪನಿಯವರನ್ನು ರಕ್ಷಣೆ ಮಾಡಲು ಹೊರಟಿದ್ದಾರೆ. ತಮ್ಮ ಬಂಡವಾಳ ಹೊರಬರಬಾರದೆಂಬ ಉದ್ದೇಶ ಅಧಿಕಾರಿಗಳದ್ದಾಗಿದೆ ನಡಹಳ್ಳಿ ಅವರು ಆರೋಪಿಸಿದರು.

ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ, ಮುಖಂಡರಾದ ಎಂ.ಎಸ್.ಪಾಟೀಲ (ನಾಲತವಾಡ), ಕಾಶಿನಾಥ ಮುರಾಳ, ಕಾಶಿರಾಯ ಮೋಹಿತೆ, ಡಿ.ವಿ.ಪಾಟೀಲ, ಡಿ.ಕೆ.ಪಾಟೀಲ, ಬಸ್ಸು ಕಶೆಟ್ಟಿ, ವಾಸುದೇವ ಹೆಬಸೂರ, ಮುದಕಪ್ಪ ಬಡಿಗೇರ, ರಾಜಣ್ಣ ಸೊಂಡೂರ, ರಾಮು ಜಗತಾಪ, ಮಲ್ಲು ಮೇಟಿ, ಈಶ್ವರ ಹೂಗಾರ, ರಾಘವೇಂದ್ರ ಮಾನೆ, ವಿಠ್ಠಲ ಮೋಹಿತೆ, ನಿಂಗಣ್ಣ ಕುಂಟೋಜಿ, ಮಹಾಂತೇಶ ಮುರಾಳ, ಪ್ರಕಾಶ ಹಜೇರಿ, ಕಕ್ಕುಸಾ ರಂಗ್ರೇಜ್, ನದೀಂ ಕಡು, ಪ್ರಭುಗೌಡ ಬಿರಾದಾರ, ಕಾಶಿನಾಥ ಸಜ್ಜನ, ಎಂ.ಎಸ್.ಸರಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net