

ಮುದ್ದೇಬಿಹಾಳ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಭರವಸೆ ನಂಬಿ ಶಾಸಕ ಸಿ.ಎಸ್.ನಾಡಗೌಡರಿಗೆ ಓಟು ಹಾಕಿ ತಪ್ಪು ಮಾಡಿದ್ದೇವೆ. ನಮ್ಮ ಓಟು ಪಡೆದುಕೊಂಡು ನಮ್ಮ ವ್ಯಾಪಾರದ ಮೂಲಗಳನ್ನೇ ನಾಶಪಡಿಸಿ ನಮ್ಮ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು ಬೀದಿಬದಿ ಡಬ್ಬಾ ಅಂಗಡಿ ವ್ಯಾಪಾರಸ್ಥರು ಅಳಲು ತೋಡಿಕೊಂಡರು.
ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಅವರ ಾರ್ಮಹೌಸ್‌ನಲ್ಲಿ ಭಾನುವಾರ ಭೇಟಿಯಾಗಿ ತಮಗಾಗಿರುವ ಅನ್ಯಾಯ ಬಿಡಿಸಿಟ್ಟು ತಮಗೆ ನ್ಯಾಯ ಕೊಡಿಸಲು ತಮ್ಮ ಪರ ನಿಲ್ಲುವಂತೆ ಅವರು ಮನವಿ ಮಾಡಿದರು.
ತಹಸೀಲ್ದಾರ್ ಕಚೇರಿ, ಬಸವೇಶ್ವರ ವೃತ್ತ ಮುಂತಾದೆಡೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಡಬ್ಬಾ ಅಂಗಡಿ ಇಟ್ಟುಕೊಂಡು ಹೊಟ್ಟೆ ಹೊರೆಯುತ್ತಿದ್ದ ನಮಗೀಗ ದಿಕ್ಕು ತೋಚದಂತಾಗಿದೆ. ನಮಗೆ ನಾಡಗೌಡರಿಂದ ಅನ್ಯಾಯವಾಗಿದೆ. ಅವರ ಸೂಚನೆಯಂತೆ ಪುರಸಭೆ ಮುಖ್ಯಾಧಿಕಾರಿ ನಮ್ಮ ಉಪಜೀವನಕ್ಕಿದ್ದ ಅಂಗಡಿಗಳನ್ನು ತೆರವು ನೆಪದಲ್ಲಿ ನಾಶಮಾಡಿದ್ದಾರೆ. ಆಗ ಶಾಸಕರನ್ನು ಭೇಟಿಯಾಗಿ ತೆರವು ನಿಲ್ಲಿಸುವಂತೆ ಮನವಿ ಮಾಡಿದರೂ ಅದು ಸರ್ಕಾರದ ಜಾಗ, ನಾನೇನು ಮಾಡಲು ಬರುವುದಿಲ್ಲ ಎಂದು ಹಾರಿಕೆ ಉತ್ತರ ನೀಡಿ ನಮ್ಮನ್ನು ಕಡೆಗಣಿಸಿದರು ಎಂದರು.
ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ ಮಾಡಲಾಗಿದೆ. ಮುಸ್ಲಿಂ ಸಮುದಾಯದವರ ಎಗ್‌ರೈಸ್, ಇನ್ನಿತರ ಡಬ್ಬಾ ಅಂಗಡಿ, ಒತ್ತು ಗಾಡಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿರುವ ಪುರಸಭೆಯವರು ಎಸ್ಸಿ, ಎಸ್ಟಿ, ಹಿಂದುಳಿದ ಸಮುದಾಯದವರು ಕೇಳಲು ಹೋದರೆ ನೀವು ಲೈಸೆನ್ಸ್ ಮಾಡಿಸಿಕೊಂಡು ಬರಬೇಕು ಎನ್ನುತ್ತಾರೆ. ಲೈಸೆನ್ಸ್ ಇದ್ದವರು ಕೇಳಿದರೆ ಬೀದಿ ಬದಿ ಡಬ್ಬಾ ಅಂಗಡಿ ಇಡಲು ಅವಕಾಶ ಕೊಡುವುದಿಲ್ಲ ಎನ್ನುತ್ತಾರೆ. ಪುರಸಭೆ ಹತ್ತಿರ ರಸ್ತೆ ಅತಿಕ್ರಮಿಸಿ ಕಟ್ಟಿರುವ ಅಂಗಡಿಗಳನ್ನು ತೆರವುಗೊಳಿಸದೆ ಇವರು ಅವರ ಪರ ನಿಂತಿದ್ದಾರೆ ಎಂದರು.
ಅಹವಾಲು ಆಲಿಸಿ ಕೆಲವು ಅಧಿಕಾರಿಗಳೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ ನಡಹಳ್ಳಿಯವರು, ಎಸ್ಸಿ, ಎಸ್ಟಿ, ಬಡವರಿಗೆ, ಹಿಂದುಳಿದವರಿಗೆ ಅನ್ಯಾಯವಾದರೆ ನಾನು ಸಹಿಸೊಲ್ಲ. ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಒಂದು ವಾರ ಕಾಲಾವಕಾಶ ನೀಡುತ್ತಿದ್ದೇನೆ. ಅಷ್ಟರೊಳಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡದಿದ್ದರೆ ಬೀದಿ ಬದಿ ವ್ಯಾಪಾರಸ್ಥರು, ಡಬ್ಬಾ ಅಂಗಡಿಯವರೊಂದಿಗೆ ಸೇರಿ ನಾನೇ ಹೋರಾಟಕ್ಕಿಳಿಯುತ್ತೇನೆ. ಸ್ಪಂದನೆ ಸಿಗದಿದ್ದರೆ ನಾನೇ ಮುಂದೆ ನಿಂತು ಎಲ್ಲ ಕಡೆ ಡಬ್ಬಾ ಅಂಗಡಿ ಇಡಿಸಲು ಮುಂದಾಗುತ್ತೇನೆ. ನನ್ನನ್ನು ಯಾರು ತಡೆಯುತ್ತಾರೋ ತಡೆಯಲಿ ಎಂದು ಎಚ್ಚರಿಸಿದರು.
ಪುರಸಭೆ ಸದಸ್ಯ ಬಸಪ್ಪ ತಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಮುಖಂಡರಾದ ಅಶೋಕ ರಾಠೋಡ ನೇಬಗೇರಿ, ಸಂಜು ಬಾಗೇವಾಡಿ, ಬೀದಿ ಬದಿ ವ್ಯಾಪಾರಸ್ಥರಾದ ಶಿವಾನಂದ ಲಮಾಣಿ, ರಾಮು ಲಮಾಣಿ, ಶಾರದಾ ಲಮಾಣಿ, ಶಾಂತಾಬಾಯಿ ಸುರೆಬಾನ, ಮಾನಪ್ಪ ಚವ್ಹಾಣ, ದೇವುಬಾಯಿ ಚವ್ಹಾಣ, ಮಂಜುಳಾ ಲಮಾಣಿ, ಸುನೀತಾ ನಾಯಕ, ಸೋಮನಾಥ ರಾಠೋಡ, ಮಲ್ಲಿಕಾರ್ಜುನ ಲಮಾಣಿ, ನಾಗೇಶ ರಾಠೋಡ, ಪ್ರೇಮಸಿಂಗ್ ಜಾಧವ, ಸುನೀಲ ಚವ್ಹಾಣ, ಮಂಜುನಾಥ ಚವ್ಹಾಣ ಸೇರಿ ಕಬ್ಬಿನ ಹಾಲು, ಚಹಾದ ಅಂಗಡಿ, ಪಾನ ಶಾಪ್, ಎಳೆನೀರು, ಎಗ್‌ರೈಸ್, ಭಜಿ ಮುಂತಾದ ವ್ಯಾಪಾರಸ್ಥರು ಇದ್ದರು.