

ಮುದ್ದೇಬಿಹಾಳ: ಶಾಸಕ ಸಿ.ಎಸ್.ನಾಡಗೌಡರಿಗೆ ಸರ್ಕಾರದಿಂದ ಹಣ ತರುವ ಯೋಗ್ಯತೆ ಇಲ್ಲ. ನನ್ನ ಶಾಸಕತ್ವ ಅವಧಿಯಲ್ಲಿ ಮಂಜೂರಾದ ಕೆಲಸಗಳನ್ನು ತಾವು ತಂದ ಕೆಲಸಗಳು ಎಂದು ಸುಳ್ಳು ಹೇಳಿ ಜನರನ್ನು ಯಾಮಾರಿಸುತ್ತಿದ್ದಾರೆ ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಗುಡುಗಿದರು.
ಇಲ್ಲಿನ ತಮ್ಮ ಾರ್ಮಹೌಸ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಾಲತವಾಡದ ಅಮರೇಶ್ವರ ದೇವಸ್ಥಾನದ ಹತ್ತಿರ ಕಾಲುವೆ ಕಾಮಗಾರಿಗೆ ಮೊನ್ನೆ ಭೂಮಿಪೂಜೆ ನೆರವೇರಿಸಿದ ವೇಳೆ ನಾನು ಸಿಂಗಲ್ ಟೆಂಡರ್ ಮಾಡಲು ಯತ್ನಿಸಿದ್ದರಿಂದ ಟೆಂಡರ್ ರದ್ದಾಗಿ ಕೆಲಸ ವಿಳಂಬವಾಗಿದೆ ಎಂದು ಆಪಾದಿಸಿರುವುದು ಸತ್ಯಕ್ಕೆ ದೂರವಾಗಿದೆ ಎಂದರು.
2013-14ರಲ್ಲಿ ಗುತ್ತಿಗೆದಾರ ಎಂ.ಎನ್.ಮದರಿ ಆ ಕೆಲಸ ಹಿಡಿದಿದ್ದರು. ರೈತರ ಮಧ್ಯೆ ವ್ಯಾಜ್ಯದಿಂದಾಗಿ ಕೆಲಸ ಅರ್ಧಕ್ಕೆ ನಿಂತಿತ್ತು. ನಂತರ ಬಾಕಿ ಉಳಿದ ಕೆಲಸ ಸೇರಿಸಿ ಶಾಸಕತ್ವದ ಕೊನೇ ಅವಧಿಯಲ್ಲಿ ಟೆಂಡರ್ ಕರೆದಿದ್ದರು. ಆಗ ಸಿಂಗಲ್ ಬಿಡ್ ಆಗಿದ್ದರಿಂದ ನಿಯಮದ ಪ್ರಕಾರ ರದ್ದುಪಡಿಸಿ ಹೊಸದಾಗಿ ಟೆಂಡರ್ ಕರೆಯಬೇಕಿತ್ತು. ಅಷ್ಟರಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಯಿತು. ನಂತರ ಹೊಸ ಸರ್ಕಾರ ಅದನ್ನು ರದ್ದುಗೊಳಿಸಿತು. ಇದುವರೆಗೂ ಹೊಸ ಟೆಂಡರ್ ಕರೆದಿಲ್ಲ. ಇದರಲ್ಲಿ ನನ್ನ ಪಾತ್ರ ಏನಿದೆ ನಾಡಗೌಡರೇ ಎಂದು ಪ್ರಶ್ನಿಸಿ ಸುಳ್ಳು ಹೇಳಿ ಮತದಾರರನ್ನು ಯಾಮಾರಿಸುವದನ್ನು ಕೈಬಿಡಿ ಎಂದರು.
ದೇವಸ್ಥಾನ ಹತ್ತಿರ ಕಾಲುವೆ ಕೆಲಸಕ್ಕಾಗಿ ಶಿವಾನಂದ ವಾಲಿ ರೈತರೊಡಗೂಡಿ ಹೋರಾಟ ನಡೆಸಿದರು. ನಮ್ಮ ನಾಯಕರು ಬೆಂಬಲಿಸಿದರು. ಪರಿಣಾಮ ಅಲ್ಲಿನ ಕೆಲಸಕ್ಕಾಗಿ 35 ಲಕ್ಷ ರೂ. ಅನುದಾನ ಮಂಜೂರು ಮಾಡಿಸಲು ನಾಡಗೌಡರಿಗೆ ಒಂದು ವರ್ಷ ಬೇಕಾಯಿತು. ಈಗ ಮತ್ತೆ ಅವರು ಹೋರಾಟಕ್ಕೆ ಮುಂದಾದಾಗ ಭೂಮಿಪೂಜೆ ಮಾಡಿದ್ದಾರೆ. ಆ ಕೆಲಸಕ್ಕೆ ಇನ್ನೂ ಟೆಂಡರ್ ಅಪ್ರೂವ್ ಆಗಿಲ್ಲ. ಯಾರ ಹೆಸರಿಗೆ ಕೆಲಸ ಆಗಿದೆ ಅನ್ನೋದು ಅಂತಿಮಗೊಳ್ಳದೆ ಪೂಜೆ ಮಾಡಿದ್ದಾರೆ. ತುರ್ತು ಕೆಲಸ ಇದ್ದರೆ ಮಾಡಿಸಲಿ ಇದಕ್ಕೆ ಅಭ್ಯಂತರ ಇಲ್ಲ. ನೀರಾವರಿ ಕೆಲಸಕ್ಕೆ ನಾನು ಯಾವತ್ತೂ ವಿರೋಧ ಮಾಡುವುದಿಲ್ಲ. ಆದರೆ ನನ್ನ, ನಮ್ಮ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.
ಇವೆಲ್ಲದರ ಹಿಂದೆ ನಾಡಗೌಡರ ದತ್ತುಪುತ್ರ ಸುರೇಶ ನಾಡಗೌಡನ ಕೈವಾಡವಿದೆ. ನನ್ನ ಅವಧಿಯಲ್ಲಿ ಕಾಂಗ್ರೆಸ್ಸಿನ ರಾಯನಗೌಡ, ಕೊಂಗಿ, ಯಲ್ಲಪ್ಪ ಅವರಿಗೆ ಕೆಲಸ ಕೊಡಿಸಿ ಬೆಂಬಲಿಸಿದ್ದೇನೆ. ಈಗ ಅಂದಾಜು 4.5 ಕೋಟಿ ರೂ. ಅನುದಾನದ ಎಎಲ್‌ಬಿಸಿ ಮೆಂಟೇನನ್ಸ್ ಟೆಂಡರ್ ಕರೆಯಲಾಗಿದೆ. ಕಾಲುವೆಯಲ್ಲಿ ಒಂದು ಬುಟ್ಟಿ ಮಣ್ಣೂ ತೆಗೆಯದೆ ಪೂರ್ತಿ ಅನುದಾನ ಎತ್ತಿ ಹಾಕುವ ಹುನ್ನಾರ ನಡೆದಿದೆ. ಆಡಳಿತಾಧಿಕಾರಿ ಇರುವ ಜಿಪಂ, ತಾಪಂ, ಪಿಡಬ್ಲುೃಡಿ ರೆಗ್ಯೂಲರ್ ಗ್ರಾೃಂಟ್ ಎತ್ತಿ ಹಾಕಿದ್ದು ದಾಖಲೆ ಸಮೇತ ಬಹಿರಂಗಪಡಿಸುವೆ ಎಂದು ಎಚ್ಚರಿಸಿದರು.
ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಬಸಪ್ಪ ತಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಮುಖಂಡರಾದ ಅಶೋಕ ರಾಠೋಡ, ಸಂಜು ಬಾಗೇವಾಡಿ, ಗಿರೀಶಗೌಡ ಪಾಟೀಲ ಹಿರೇಮುರಾಳ, ಕಾವೇರಿ ಕಂಬಾರ, ಪ್ರೀತಿ ಕಂಬಾರ ಇತರರಿದ್ದರು.