

ಮುದ್ದೇಬಿಹಾಳ: ಪ್ರತಿಯೊಂದು ಗ್ರಾಮದಲ್ಲಿ ಗೌತಮ ಬುದ್ದರ ತತ್ವಗಳು ಪ್ರಸಾರಗೊಳ್ಳಬೇಕು. ಇದರಿಂದ ಜಾತಿ, ಧರ್ಮಗಳ ನಡುವೆ ನಡೆಯುತ್ತಿರುವ ಕಲಹ ತಪ್ಪಿಸುವುದು ಸಾಧ್ಯವಿದೆ ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅಭಿಪ್ರಾಯ ಪಟ್ಟರು.
ವಿಜಯಪುರದಿಂದ ತಮ್ಮ ಆರೋಗ್ಯ ವಿಚಾರಿಸಲು ಶನಿವಾರ ಆಗಮಿಸಿದ್ದ ಬೋಧಿ ಪ್ರಜ್ಞ ಬಂತೇಜಿ ಅವರನ್ನು ಸನ್ಮಾನಿಸಿ, ಆಶಿರ್ವಾದ ಪಡೆದುಕೊಂಡು ಅನೌಪಚಾರಿಕವಾಗಿ ನಡಹಳ್ಳಿ ಅವರು ಮಾತನಾಡಿದರು.
ದೇವರಹಿಪ್ಪರಗಿ ಕ್ಷೇತ್ರದಲ್ಲಿ ಶಾಸಕನಾಗಿದ್ದಾಗ ಆಕರ್ಷಕ, ಸುಂದರ ಬುದ್ಧ ವಿಹಾರ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೊಡಿಸಿದ್ದೆ. ಇವತ್ತಿಗೂ ಆ ಕ್ಷೇತ್ರದವರು ಅದನ್ನು ಸ್ಮರಿಸುತ್ತಾರೆ. ನನ್ನ ಕನಸು ಈ ಬಾರಿ ನನಸಾಗಲಿಲ್ಲ ಎಂದು ವಿಷಾದಿಸಿದ ನಡಹಳ್ಳಿ ಅವರು, ಸದ್ಯ ರಾಜ್ಯ ಸರ್ಕಾರ ಮನೆಯ ಯಜಮಾನಿಗೆ 2000 ರೂ. ಸಹಾಯ ಧನ ಪ್ರತಿ ತಿಂಗಳು ಕೊಡುತ್ತಿರುವುದರ ಮೂಲ ಚಿಂತನೆ ನನ್ನದೇ ಆಗಿತ್ತು. ಶಾಸಕನಾಗಿದ್ದಾಗ ಅಧಿವೇಶನದಲ್ಲಿ ಪ್ರತಿಯೊಬ್ಬ ದಲಿತ ಕುಟುಂಬದ ಮಹಿಳೆಗೆ ಮಾಸಿಕ 2000 ರೂ. ಕೊಡುವ ಯೋಜನೆ ಕುರಿತು ಚರ್ಚಿಸಿದ್ದೆ ಎಂದು ಬಹಿರಂಗಪಡಿಸಿದರು.
ಬೋಧಿ ಪ್ರಜ್ಞ ಬಂತೇಜಿ ಮಾತನಾಡಿ, ನಡಹಳ್ಳಿ ಅವರಂತಹ ಅಭಿವೃದ್ಧಿ ಪರ ನಿಲುವು ಹೊಂದಿರುವ ರಾಜಕಾರಣಿ ದೊರಕುವುದು ಅತಿ ವಿರಳ. ಇಂಥವರನ್ನು ಜನತೆ ಕಳೆದುಕೊಂಡಿರುವುದು ವಿಷಾದಪಡುವಂಥದ್ದು. ನಡಹಳ್ಳಿ ಅವರು ಮಾಡಿರುವ ಸಮಾಜ ಸೇವೆ, ಅಭಿವೃದ್ಧಿ ಕೆಲಸಗಳನ್ನು ಮರೆಯಲಾಗದು ಎಂದು ಶ್ಲಾಸಿದರು.
ಬೇಗ ಚೇತರಿಸಿಕೊಂಡು ಮತ್ತೆ ಸಮಾಜ ಸೇವೆಗೆ, ನೊಂದ ಜನರ ಸೇವೆಗೆ ಮರಳುವಂತೆ ಆಶೀರ್ವದಿಸಿದರು. ದೇವರಹಿಪ್ಪರಗಿ ತಾಲೂಕು ಕಡಕೋಳದ ಮುಖಂಡ ಚಂದ್ರಶೇಖರ ಕಡಕೋಳ, ಆ ಗ್ರಾಮದ ಯುವಕರು ಇದ್ದರು.