

ಸುಭಾಸ ಧೂಪದಹೊಂಡ ಕಾರವಾರ
ಉತ್ತರ ಕನ್ನಡಕ್ಕೆ ಗುಡ್ಡದ ಭೂತ ಕಾಡಿದೆ. ಹಸಿರಿನಿಂದ ಆಚ್ಛಾದಿತ ಪಶ್ಚಿಮ ಘಟ್ಟಗಳ ಸಾಲೇ ಉತ್ತರ ಕನ್ನಡದ ಐಡೆಂಟಿಟಿ, ಆದರೆ, ಅವುಗಳಿಂದಲೇ ಆಗಾಗ ಸಂಭವಿಸುವ ದರೆ ಜರಿಯುವ ಘಟನೆಗಳು ಗುಡ್ಡದ ಬುಡದ ಜನರ ಎದೆಯನ್ನು ಗಡಗಡ ನಡುಗಿಸುತ್ತಿರುವುದು ಮಾತ್ರ ವಿಪರ್ಯಾಸ. ಇಂಥ ದುರ್ಘಟನೆಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಮಾತ್ರ ತಿಳಿಯದಾಗಿದೆ.
ಪ್ರತಿ ಬಾರಿ ಗುಡ್ಡ ಕುಸಿತ ಸಂಭವಿಸಿದಾಗ ವಿವಿಧ ತಜ್ಞ ಸಮಿತಿಗಳ ವರದಿಯನ್ನು ಸರ್ಕಾರ ಪಡೆಯುತ್ತದೆ. ಆದರೆ, ಅವುಗಳ ಸಲಹೆಗಳು ಮಾತ್ರ ಜಾರಿಯಾಗದೇ ಡಿಸಿ, ಸಿಎಸ್ ಕಚೇರಿಯ ಕಪಾಟು ಸೇರುತ್ತಿರುವುದು ದುರಂತ.
15 ವರ್ಷಗಳಲ್ಲಿ 50ಕ್ಕೂ ಹೆಚ್ಚು ಕಡೆ ಕುಸಿತ!
2009ರ ಅಕ್ಟೋಬರ್ 2ರಂದು ಕಾರವಾರ ಕಡವಾಡ ಮಾಡಿಬಾಗದ ಜರಿವಾಡದಲ್ಲಿ ಬೃಹತ್ ಗುಡ್ಡ ಕುಸಿತ ಸಂಭವಿಸಿತ್ತು. 10 ಮನೆಗಳು ತಮ್ಮ ಸ್ಥಾನದಿಂದ ಜರಿದು ಮಣ್ಣಿನಡಿ ಸಿಲುಕಿಕೊಂಡಿದ್ದವು. 19 ಜನ ಜೀವಂತ ಸಮಾಧಿಯಾಗಿದ್ದರು. ಸುಮಾರು 10 ದಿನ ನಿರಂತರ ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರ ತೆಗೆಯಲಾಗಿತ್ತು. ಅದೇ ದಿನ ಇನ್ನೂ 21 ಕಡೆ ಗುಡ್ಡ ಕುಸಿತವಾಗಿತ್ತು.
ಅದರ ನಂತರ 2017ರಲ್ಲಿ ಕುಮಟಾದ **ದುಂಡಕುಳಿಯಲ್ಲಿ ಹೆದ್ದಾರಿ ಪಕ್ಕದ ದರೆ ಕುಸಿದು ಮೂರು ಮಕ್ಕಳು ಮೃತಪಟ್ಟರು. 2021ರಲ್ಲಿ ಯಲ್ಲಾಪುರದ ಕಳಚೆಯಲ್ಲಿ, ಅರಬೈಲ್ ಘಟ್ಟದಲ್ಲಿ, ಅಣಶಿ ಘಟ್ಟದಲ್ಲಿ ಸೇರಿ 30ಕ್ಕೂ ಅಧಿಕ ಕಡೆ, 2022ರಲ್ಲಿ ಭಟ್ಕಳದಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಈಗ ಶಿರೂರು ಗುಡ್ಡ ಕುಸಿತದ ದುರಂತವು 2009ರ ಕಡವಾಡದ ಘಟನೆಯನ್ನು ನೆನಪಿಸಿದೆ.
ಮಾನವ ನಿರ್ವಿುತ ಪ್ರಮಾದ:
ಮೇಲಿನ ಎಲ್ಲ ಗುಡ್ಡ ಕುಸಿತಗಳೂ ಮಾನವ ನಿರ್ವಿುತ ಪ್ರಮಾದಗಳಿಂದಲೇ ಸಂಭವಿಸಿರುವುದು ನಿರ್ವಿವಾದ. ಆದರೆ, ಇವುಗಳ ಹೊರತಾಗಿಯೂ ಪಶ್ಚಿಮ ಘಟ್ಟಗಳ ಸಾಲಿನ ನಡುವೆ ಉತ್ತರ ಕನ್ನಡದ ಅಲ್ಲಲ್ಲಿ ದೊಡ್ಡ ಪ್ರಮಾಣದ ಭೂ ಕುಸಿತಗಳು ಸಂಭವಿಸುತ್ತಿರುವುದು ಸುದ್ದಿಯಾಗುತ್ತಿಲ್ಲ. ಹೊನ್ನಾವರದ ಗೇರುಸೊಪ್ಪ, ಯಲ್ಲಾಪುರದ ಬಾರೆ, ಕಾರವಾರ ದೇವಳಮಕ್ಕಿ, ಕೊಡಸಳ್ಳಿ, ಶಿರಸಿಯ ಕಕ್ಕಳ್ಳಿ, ಈಗ ಅಂಕೋಲಾದ ಅಗಸೂರು ಹೊನ್ನಳ್ಳಿ ಕಾಡಿನ ನಡುವೆಯೂ ಕುಸಿತವಾಗಿದೆ. ಇವುಗಳಿಂದ ದೊಡ್ಡ ಪ್ರಮಾಣದ ಕಾಡು ನಾಶವಾಗಿದೆ. ಪಶ್ಚಿಮ ಘಟ್ಟದ ನಡುವಿನ ಭಾರಿ ಕುಸಿತಗಳ ಬಗ್ಗೆ ಅಧ್ಯಯನ ನಡೆಯಬೇಕಿದೆ. ಕೈಗಾ ಅಣು ಸ್ಥಾವರ, ಕೊಡಸಳ್ಳಿ, ಗೇರುಸೊಪ್ಪ ಅಣೆಕಟ್ಟೆಗಳು ಹೀಗೆ ಸೂಕ್ಷ್ಮ ಪ್ರದೇಶಗಳ ಸುತ್ತವೇ ಸಂಭವಿಸಿದ್ದು, ಇವು ಮುಂಬರುವ ಅಪಾಯಗಳ ಮುನ್ಸೂಚನೆಯಾಗಿವೆ ಎಂದರೆ ತಪ್ಪಾಗಲಾರದು.
ಪ್ರಮುಖ ವರದಿಗಳು
ಉತ್ತರ ಕನ್ನಡದಲ್ಲಿ 439 ಭೂ ಕುಸಿತ ಸ್ಥಳಗಳು ಎಂದು ಜಿಎಸ್ಐ 2021ರಲ್ಲಿ ವರದಿ.
ರಾಜ್ಯದಲ್ಲಿ ಅತ್ಯಧಿಕ ಭೂ ಕುಸಿತವಾಗುವ ಸ್ಥಳಗಳ ಪೈಕಿ ಉತ್ತರ ಕನ್ನಡಕ್ಕೆ ಮೊದಲ ಸ್ಥಾನ
ಭಾರತೀಯ ವಿಜ್ಞಾನ ಸಂಸ್ಥೆಯಿಂದ 2013ರಲ್ಲಿ ಉತ್ತರ ಕನ್ನಡದಲ್ಲಿ ಧಾರಣಾ ಸಾಮರ್ಥ್ಯದ ಅಧ್ಯಯನ
ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯ ಮೀರಿದೆ. ಇದರಿಂದ ಯಾವುದೇ ಹೊಸ ಬೃಹತ್ ಯೋಜನೆಗಳು ಬೇಡ, ಸುಸ್ಥಿರ ಅಭಿವೃದ್ಧಿ ಮಾಡಬೇಕು ಎಂದು 2013 ರಲ್ಲೇ ಡಾ.ಟಿ.ವಿ. ರಾಮಚಂದ್ರ ನೇತೃತ್ವದ ಸಮಿತಿ ವರದಿ.
ಭಾರತೀಯ ವಿಜ್ಞಾನ ಸಂಸ್ಥೆಯಿಂದ 2011ರಲ್ಲಿ ಜಿಲ್ಲೆಯ ಗುಡ್ಡ ಕುಸಿತದ ಕುರಿತು ಅಧ್ಯಯನ ವರದಿ.
ಇಳಿಜಾರು ಗುಡ್ಡ ಕಡಿತ ಮಾಡಬೇಕು. ಗುಡ್ಡ ಕುಸಿಯುವ ಪ್ರದೇಶಗಳಲ್ಲಿ ಹಸಿರು ಮುಚ್ಚಿಗೆ ಹೆಚ್ಚಿಸಬೇಕು. ಅಕ್ರಮ ಕ್ವಾರಿ ನಿಲ್ಲಿಸಬೇಕು ಎಂದು ಸಲಹೆ.
ಗುಡ್ಡ ಕುಸಿತಕ್ಕೆ ಕಾರಣವೇನು..?
ರಾಷ್ಟ್ರೀಯ ಹೆದ್ದಾರಿ, ಕೊಂಕಣ ರೈಲ್ವೆ, ಕ್ವಾರಿಗಳು, ಸಾಗುವಳಿ, ಮನೆ ಕಟ್ಟಿಕೊಳ್ಳುವ ಸಲುವಾಗಿ ಅವೈಜ್ಞಾನಿಕ ಗುಡ್ಡ ಕಡಿತ.
ರೆಸಾರ್ಟ್, ಜನವಸತಿ ನಿರ್ವಣಗಳಿಗಾಗಿ ನದಿಯ ಅಂಚನ್ನು ತುಂಬುವುದು. ಅರಣ್ಯ ನಾಶ ಹಾಗೂ ಮಿತಿ ಮೀರಿದ ಮಳೆ ಗುಡ್ಡ ಕುಸಿತಕ್ಕೆ ಪ್ರಮುಖ ಕಾರಣ ಎಂದು ಎಲ್ಲ ವರದಿಗಳು ಹೇಳಿವೆ.
ಅಭಿವೃದ್ಧಿ-ಅರಣ್ಯ ನಾಶದ ನಡುವಿನ ನಿಷ್ಕರ್ಷೆ
ಒಂದೆಡೆ ಉತ್ತರ ಕನ್ನಡಕ್ಕೆ ಹೊಸ ರೈಲ್ವೆ ಯೋಜನೆಗಳು ಬೇಕು. ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ರಸ್ತೆ ವಿಸ್ತರಣೆಯಾಗಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿವೆ. ಇನ್ನೊಂದೆಡೆ ದೊಡ್ಡ ಅನಾಹುತಗಳು ಸಂಭವಿಸುತ್ತಿದ್ದು, ಅವಕ್ಕೆಲ್ಲ ಪರಿಸರ ನಾಶವೇ ಕಾರಣ ಎಂಬ ತಜ್ಞರ ವರದಿಗಳು ಬರುತ್ತಿವೆ. ಅರಣ್ಯ ನಾಶ ತಡೆ ಹಾಗೂ ಅಭಿವೃದ್ಧಿ ಎರಡರ ನಡುವೆ ಸಮನ್ವಯ ಸಾಧಿಸುವುದು ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.