

ಹನೂರು: ಆಧುನಿಕ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣ ಆಟಗಳು ನಶಿಸುತ್ತಿವೆ. ಆದರೆ ಹನೂರು ಭಾಗದಲ್ಲಿ ಇನ್ನು ಜೀವಂತವಾಗಿದ್ದು, ಇದಕ್ಕೆ ಗೌರಿ -ಗಣೇಶ ಹಬ್ಬದ ಮಾರನೇಯ ದಿನ ನಡೆದ ಗ್ರಾಮೀಣ ಸೊಗಡಿನ ಆಟೋಟಗಳೇ ಸಾಕ್ಷಿಯಾದವು.
ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಹಬ್ಬದ ಹರಿದಿನಗಳಂದು ಜನರು ಮನರಂಜನೆಗಾಗಿ ಲಗೋರಿ, ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಹೊಡೆಯುವುದು, ತೆಂಗಿನಕಾಯಿ ಒಡೆಯುವುದು, ಕುಂಟೆಬಿಲ್ಲೆ, ಗುಂಡು ಎತ್ತುವುದು ಇನ್ನಿತರ ಆಟೋಟಗಳನ್ನು ಹಿರಿಯರ ಸಮ್ಮುಖದಲ್ಲಿ ಆಯೋಜಿಸಲಾಗುತ್ತಿತ್ತು. ಹೆಚ್ಚು ಜನರು ಭಾಗಿಯಾಗಿ ಖುಷಿ ಪಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಬೆಳೆದಂತೆ ಹಳ್ಳಿಗಳಲ್ಲಿ ಗ್ರಾಮೀಣ ಮನರಂಜನೆಯ ಆಟೋಟಗಳು ಕಣ್ಮರೆಯಾಗುತ್ತಿವೆ. ಆದರೆ ಹನೂರು ಭಾಗದ ಕೆಲವು ಗ್ರಾಮಗಳಲ್ಲಿ ಈ ಆಟಗಳು ಇನ್ನು ಮುಂದುವರಿದಿದೆ.
ಹನೂರು ಭಾಗದಲ್ಲಿ ಗ್ರಾಮೀಣ ಜನತೆ ಪ್ರತಿ ವರ್ಷ ಗೌರಿ ಗಣೇಶ ಹಬ್ಬದ ಮಾರನೆಯ ದಿನ ವಿವಿಧ ಮನರಂಜನೆಯ ಆಟಗಳನ್ನು ಏರ್ಪಡಿಸಿಕೊಂಡು ಖುಷಿ ಪಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಾಗಾಗಿ ಈ ಭಾಗದ ಜನರು ಗುರುವಾರ ವಿವಿಧ ಮನರಂಜನೆ ಆಟೋಗಳನ್ನು ಆಯೋಜಿಸಿ ಸಂತಸಪಟ್ಟರು. ಕಣ್ಣಿಗೆ ಬಟ್ಟೆಕಟ್ಟಿಕೊಂಡು ಮಡಕೆ ಹೊಡೆಯುವುದು, ಮರಕ್ಕೆ ಕಟ್ಟಿರುವ ತೆಂಗಿನಕಾಯಿನ್ನು ಹೊಡೆಯುವುದು, ನೀರಿನಲ್ಲಿ ನಾಣ್ಯ ಬಳಸಿ ಆಟ ಆಡುವುದು, ಕಲ್ಲು ಎತ್ತುವುದು, ಚದುರಂಗದಾಟ ಸೇರಿದಂತೆ ಇನ್ನಿತರ ಮನರಂಜನೆಯ ಆಟೋಟಗಳು ನಡೆದವು. ಆಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರು. ಈ ವೇಳೆ ಕೆಲ ಯುವಕರು ಸಿಳ್ಳೆ, ಕೇಕೇ ಹಾಕಿ ಖುಷಿಪಟ್ಟರೆ, ಗ್ರಾಮದ ಹಿರಿಯರು ವೀಕ್ಷಿಸುವುದರ ಮೂಲಕ ಆಟೋಟಗಳಿಗೆ ಸಾಥ್ ನೀಡಿದರು. ಆಟಗಳು ಬೆಳಗ್ಗೆ 6ರಿಂದ 10ಗಂಟೆಯವರೆಗೆ ನಡೆಯಿತು.
ಮನೆ ದೇವರ ದರ್ಶನ: ಗೌರಿ-ಗಣೇಶ ಹಬ್ಬದ ಮಾರನೆಯ ದಿನ ಈ ಭಾಗದಲ್ಲಿನ ಬಹುತೇಕ ಕುಟುಂಬಸ್ಥರು ಮನೆದೇವರ ದರ್ಶನಕ್ಕೆ ಹೋಗಿ ಪೂಜೆ ಸಲ್ಲಿಸುವುದು ವಾಡಿಕೆ. ಆದರಂತೆಯೇ ಮಲೆಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿಧಿ, ಮೂಗೂರಿನ ತಿಬ್ಬಾದೇವಿ, ತಿ.ನರಸೀಪುರದ ಚೌಡೇಶ್ವರಿ, ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗಸ್ವಾಮಿ, ಹನೂರಿನ ಬೆಟ್ಟಳ್ಳಿ ಮಾರಮ್ಮ, ಸಂತೇಮರಳ್ಳಿಯ ಸಮೀಪದ ಬಾಣಹಳ್ಳಿ ಸತ್ಯವತಿ, ದೇಶವಳ್ಳಿಯ ಸಿದ್ದದೇವರ ದೇಗುಲ, ಮಧುವನಹಳ್ಳಿಯ ಸಿದ್ದಪ್ಪನಬೆಟ್ಟ ಸೇರಿದಂತೆ ಆಯಾ ಕುಟುಂಬದ ಜನರು ಮನೆದೇವರ ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಕಿಕ್ಕಿರಿದ ಬಸ್‌ಗಳು: ಗೌರಿ -ಗಣೇಶ ಹಬ್ಬ ಮುಗಿದ ಬಳಿಕ ಗುರುವಾರ ಬೆಳಗ್ಗೆ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಮನೆ ದೇವರ ದೇಗುಲಕ್ಕೆ ತೆರಳುವ ಕುಟುಂಬಸ್ಥರು ಬಸ್ ನಿಲ್ದಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ ಬೆಳಗ್ಗೆಯಿಂದ 10 ಗಂಟೆಯವರೆಗೆ ಸಂಚರಿಸುವ ಬಸ್‌ಗಳ ಸಂಖ್ಯೆ ಕಡಿಮೆ ಇತ್ತು. ಆಗಮಿಸುವ ಬಸ್‌ಗಳು ಜನರಿಂದ ಕಿಕ್ಕಿರಿದು ತುಂಬುತ್ತಿದ್ದವು. ಪರಿಣಾಮ ವಿದ್ಯಾರ್ಥಿಗಳು ಹಾಗೂ ಜನರು ನಿಲ್ದಾಣಗಳಲ್ಲಿ ಬಸ್ಸಿಗಾಗಿ ಗಂಟೆಗಟ್ಟಲೇ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು.