ಬಲಿಗಾಗಿ ಕಾಯುತ್ತಿವೆ ಸಾಲು ಮರಗಳು

6kls1 (1)
ಕುದುರೆಮುಖ ರಾಜ್ಯ ಹೆದ್ದಾರಿಯಲ್ಲಿ ರಸ್ತೆಗೆ ಬಾಗಿ ನಿಂತಿರುವ ಮರಗಳು
Published on

ಕಳಸ: ಕಳಸ-ಕುದುರೆಮುಖ ರಾಜ್ಯಹೆದ್ದಾರಿ ಬದಿಯಲ್ಲಿರುವ ಸಾಲು ಸಾಲು ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ವಾಹನ ಸವಾರರು ಪ್ರತಿನಿತ್ಯ ಆತಂಕದಲ್ಲೇ ಸಂಚರಿಸುವಂತಾಗಿದೆ.
ಕಳಸ-ಕುದುರೆಮುಖ ರಾಜ್ಯಹೆದ್ದಾರಿ ಬಸ್ರಿಕಲ್ ಚೆಕ್‌ಪೋಸ್ಟ್ ಸಮೀಪದಿಂದ ಭಗವತಿವರೆಗೆ ಹಲವೆಡೆ ಹೆದ್ದಾರಿ ಬದಿಯಲ್ಲಿ ರುವ ಅಕೇಶಿಯ, ನೀಲಗಿರಿ ಮರಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಮಳೆಗಾಲದಲ್ಲಿ ಗಾಳಿ, ಮಳೆಗೆ ಮರಗಳು ರಸ್ತೆಗೆ ಬೀಳುವುದರಿಂದ ಅಪಾಯ ತಪ್ಪಿದ್ದಲ್ಲ. ಹೆದ್ದಾರಿಯ ಸುಮಾರು 15 ಕಿಮೀ ನೂರಾರು ಮರಗಳು ರಸ್ತೆ ಚಾಚಿಕೊಂಡು ನಿಂತಿವೆ. ಈ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಮಲೆನಾಡು, ಕರಾವಳಿಯನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಪ್ರತಿ ನಿತ್ಯ ನೂರಾರು ಪ್ರವಾಸಿಗರು ಸೇರಿದಂತೆ ಸ್ಥಳೀಯರು ಸಂಚರಿಸುತ್ತಾರೆ. ಇಲ್ಲಿ ನೆಟ್‌ವರ್ಕ್ ಕೂಡ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಪ್ರತಿ ನಿತ್ಯ ಬೀಳುತ್ತಿರುವ ಮರಗಳಿಂದ ಪ್ರಯಾಣಿಕರಿಗೆ ಸಮಸ್ಯೆ ತಪ್ಪಿದಲ್ಲ.
ರಾತ್ರಿ ಮರ ಬಿದ್ದರೆ ಬೆಳಗ್ಗೆವರೆಗೆ ಕಾಡುದಾರಿ ಮಧ್ಯೆ ರಾತ್ರಿ ಪೂರ್ತಿ ಕಳೆಯ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತುರ್ತು ಚಿಕಿತ್ಸೆಗಾಗಿ ಆಂಬಲೆನ್ಸ್‌ನಲ್ಲಿ ರೋಗಿಯನ್ನು ಮಂಗಳೂರು ಮಣಿಪಾಲಕ್ಕೆ ಕರೆದುಕೊಂಡು ಹೋಗುವ ಸಂದರ್ಭದಲ್ಲೂ ರಸ್ತೆಗೆ ಅಡ್ಡಲಾಗಿ ಮರಬಿದ್ದು ಸಾಕಷ್ಟು ತೊಂದರೆಯಾಗಿದೆ.
ಕುದುರೆಮುಖ ರಸ್ತೆಯೂ ತೀರ ಹದೆಗೆಟ್ಟಿದ್ದು, ಹೆಜ್ಜೆಗೆಂದು ಸಿಗುವ ಗುಂಡಿಗಳು ಪ್ರಯಾಣಿಕರಿಗೆ ಪ್ರಾಣ ಸಂಕಟವಾಗಿದೆ. ಗುಂಡಿಗಳನ್ನು ತಪ್ಪಿಸಿ ಪ್ರಯಾಣಿಸಲು ಎದುರು ಸಿಗುವ ಮರಗಳು ಇನ್ನೊಂದು ರೀತಿಯಲ್ಲಿ ತೊಂದರೆ ನೀಡುತ್ತದೆ. ಮಳೆಗಾಲದಲ್ಲಿ ಇದೇ ಮರಗಳಿಂದ ರಸ್ತೆಯೂ ಶಿಥಿಲಗೊಳ್ಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net