

ಕುಂದಾಪುರ: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ಲವ ಸಂಘಟನೆ ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸಮಾಜಕ್ಕೆ ತಿಳಿವಳಿಕೆ ನೀಡುವ ಜವಾಬ್ದಾರಿಯನ್ನು ನಿಸ್ವಾರ್ಥ ಮನೋಭಾವನೆಯಿಂದ ಕೈಗೊಂಡು, ಬಿಲ್ಲವ ಸಮುದಾಯ ಇತರ ಸಮುದಾಯಕ್ಕೆ ಮಾದರಿಯಾಗುವಂತಹ ಕಾರ್ಯ ಹಮ್ಮಿಕೊಳ್ಳಬೇಕು ಎಂದು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಹೇಳಿದರು.
ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಕುಂದಾಪುರದ ನಾರಾಯಣಗುರು ಮಂದಿರದಲ್ಲಿ ಶನಿವಾರ ನಡೆದ ಬೈಂದೂರು, ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಬಿಲ್ಲವ ಸಂಘಟನೆಗಳ ಚಿಂತನ ಮಂಥನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಲ್ಲವ ಸಂಘದ ಮಹಿಳಾ ಘಟಕ ಅಧ್ಯಕ್ಷೆ ಗಿರಿಜಾ ಮಾಣಿಗೋಪಾಲ್, ಕುಂದಾಪುರ ತಾಲೂಕು ವೈದ್ಯಾಧಿಕಾರಿ ಪ್ರೇಮಾನಂದ, ಬಿಲ್ಲವ ಸಂಘದ ಉಪಾಧ್ಯಕ್ಷರಾದ ಮುಲ್ಲಿ ರಾಮ ಪೂಜಾರಿ, ಶಿವರಾಮ ಪೂಜಾರಿ, ಬೈಂದೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ, ಸಂಘದ ಕಾರ್ಯದರ್ಶಿ ಯೋಗೀಶ್ ಪೂಜಾರಿ ಕೋಡಿ, ಯುವಕ ಮಂಡಲ ಅಧ್ಯಕ್ಷ ಸಂದೇಶ ಪೂಜಾರಿ, ಕೋಶಾಧಿಕಾರಿ ವಿನಯ್ ಪೂಜಾರಿ ಬನ್ನಾಡಿ ಮತ್ತಿತರರು ಉಪಸ್ಥಿತರಿದ್ದರು. ಗುಲಾಬಿ ಜಯಸೂರ್ಯ ಪೂಜಾರಿ ಪ್ರಾರ್ಥಿಸಿದರು. ಕಾರ್ಯದರ್ಶಿ ಯೋಗೀಶ್ ಪೂಜಾರಿ ಕೋಡಿ ಸ್ವಾಗತಿಸಿದರು. ಶ್ರೀ ನಾರಾಯಣ ಗುರು ಶೈಕ್ಷಣಿಕ, ಸಾಂಸ್ಕೃತಿಕ ದತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಕಡ್ಗಿಮನೆ ಕಾರ್ಯಕ್ರಮ ನಿರ್ವಹಿಸಿದರು.