ಪ್ರತಿಭಟನೆ ಬಿಸಿ: ರೋಹಿತ್ ಚಕ್ರತೀರ್ಥಗೆ ಇಂದು ನಡೆಯಬೇಕಿದ್ದ 'ನಾಗರಿಕ ಸನ್ಮಾನ' ಮುಂದೂಡಿಕೆ

Rohith Chakrathirtha
Published on

ಮಂಗಳೂರು: ಸಾಹಿತಿ, ಚಿಂತಕ ರೋಹಿತ್ ಚಕ್ರತೀರ್ಥ ಅವರನ್ನು ಸನ್ಮಾನಿಸಲೆಂದು ಮಂಗಳೂರು ನಗರದಲ್ಲಿ ಆಯೋಜಿಸಿದ್ದ 'ನಾಗರಿಕ ಸನ್ಮಾನ' ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಸೇವಾಂಜಲಿ ಚಾರಿಟಬಲ್​​ ಟ್ರಸ್ಟ್ ಸಹಯೋಗದೊಂದಿಗೆ ಚಿಂತನಾ ಗಂಗಾ ವತಿಯಿಂದ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲಿನ ಸಭಾಂಗಣದಲ್ಲಿ ರೋಹಿತ್ ಚಕ್ರತೀರ್ಥ ಅವರಿಗೆ ಶನಿವಾರ(ಜೂ.25) ನಾಗರಿಕ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಉದ್ಭವಿಸಿದ ವಿವಾದದ ಇನ್ನೂ ತಣ್ಣಗಾಗಿಲ್ಲ. ಹಾಗಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿ‌, ಗಲಾಟೆ, ದೊಂಬಿ ನಡೆಸಿ ನಗರದ ಶಾಂತಿ, ಸುವ್ಯವಸ್ಥೆ ಹಾಳು ಮಾಡುವ ಸಾಧ್ಯತೆ ಇದೆ ಎಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಸನ್ಮಾನ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ 'ಭರತ ಖಂಡದ ಗತವೈಭವ ಮತ್ತು ಅಳಿಸಿ ಹೋದ ಇತಿಹಾಸ' ಕುರಿತು ರೋಹಿತ್ ಚಕ್ರತೀರ್ಥರಿಂದ ವಿಚಾರ ಮಂಡನೆ, ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯ ವಹಿಸಬೇಕಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net