ನಿಗದಿತ ಅವಧಿ ಮುಗಿದರೂ ಪೂರ್ಣಗೊಳ್ಳದ ರಸ್ತೆ

19 GAJENDRAGAD 1
Published on

ಗಜೇಂದ್ರಗಡ: ತಾಲೂಕಿನ ಪ್ಯಾಟಿ ಗ್ರಾಮದಿಂದ ಹೊನ್ನಿಗನೂರ ಗ್ರಾಮದ ರಸ್ತೆ ದುರಸ್ತಿ ಕಾರ್ಯದ ನಿಗದಿತ ಅವಧಿ ಮುಗಿದರೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಗ್ರಾಮಸ್ಥರು ಹದಗೆಟ್ಟ ದಾರಿ ಮತ್ತು ಧೂಳಿನ ಮಧ್ಯೆ ವಾಹನ ಚಾಲನೆ, ಪ್ರಯಾಣ ಮಾಡಬೇಕಾದ ಸ್ಥಿತಿಯಿದೆ.

ವಾಹನ ಸವಾರರು ರಸ್ತೆಯಲ್ಲಿ ಹೊರಟರೆ ಸಾಕು ಕಣ್ಣು ತುಂಬಾ ಧೂಳು ಅಡರುತ್ತದೆ. ಕಾಲಿಟ್ಟರೆ ಸಾಕು ಜಲ್ಲಿಕಲ್ಲು ಚುಚ್ಚುತ್ತವೆ. ಗಾಲಿಗಳು ಪಂಕ್ಚರ್ ಆಗುತ್ತವೆ. ಮುಖಗವುಸು ಇಲ್ಲದೆ ಪ್ರಯಾಣ ಅಸಾಧ್ಯ. ಎದುರು ಬದುರಾಗಿ ಬಂದರಂತೂ ದಾರಿ ಕಾಣದೆ ಮುಂದೆ ಹೋಗುವುದು ಕಷ್ಟದಾಯಕವೆನಿಸುತ್ತದೆ. ಇದರಿಂದಾಗಿ ದಿನನಿತ್ಯವೂ ಪ್ಯಾಟಿ, ಮುಶಿಗೇರಿ, ಹಿರೇಅಳಗುಂಡಿ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಈ ರಸ್ತೆಯು ಗಜೇಂದ್ರಗಡ, ಮುಶಿಗೇರಿ, ಗುಳಗುಳಿ, ನೆಲ್ಲೂರ, ಹಿರೇಅಳಗುಂಡಿ ಗ್ರಾಮಗಳ ರಸ್ತೆಯ ಪರಿಸ್ಥಿತಿ ಕಂಡು ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಪ್ಯಾಟಿ ಗ್ರಾಮದಿಂದ ಮುಶಿಗೇರಿಯವರೆಗೆ 3 ಕಿ.ಮೀ ರಸ್ತೆ, ಮುಶಿಗೇರಿಯಿಂದ ಹೊನ್ನಿಗನೂರವರೆಗೆ 8.3 ಕಿ.ಮೀ ರಸ್ತೆ ಕಾಮಗಾರಿಯನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ತೀರ್ವನಿಸಲಾಗಿತ್ತು.

ಗುತ್ತಿಗೆದಾರನ ಹಿತ ಕಾಯಲು ಅಧಿಕಾರಿಗಳು ಜನರಿಗೆ ತೊಂದರೆ ನೀಡುತ್ತಿದ್ದಾರೆ. ಶೀಘ್ರದಲ್ಲಿಯೇ ರಸ್ತೆ ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸಬೇಕು ಇಲ್ಲದಿದ್ದರೆ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಪ್ರತಿಭಟನೆ ನಡೆಸಲಾಗುವುದು.| ನಾಗರಾಜ ಪಾಟೀಲ ಹಿರೇಅಳಗುಂಡಿ ಗ್ರಾಪಂ ಸದಸ್ಯ

ಬೆಂಗಳೂರು ಮೂಲದ ಪ್ರಥಮ ದರ್ಜೆ ಗುತ್ತಿಗೆ ದಾರ ರೊಬ್ಬರಿಗೆ ಕೆಲಸ ವಹಿಸಿತ್ತು. ಆದರೆ, ಹಣಕಾಸಿನ ತೊಂದರೆಯಿಂದ ರಸ್ತೆ ನಿರ್ಮಾಣ ಕಾಮಗಾರಿ ತಡವಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು. | ಐ.ಎನ್. ಹೊಸೂರಲೋಕೋಪಯೋಗಿ ಇಲಾಖೆ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net