

ಬೇತಮಂಗಲ; ಕೋಲಾರದಿಂದ ಬೇತಮಂಗಲಕ್ಕೆ ಸಂಪರ್ಕ ಕಲ್ಪಿಸುವ 28 ಕಿಮೀ ಉದ್ದದ ರಾಜ್ಯ ಹೆದ್ದಾರಿಯು ಬಹುತೇಕ ಹಾಳಾಗಿದ್ದು, ಮೂರು ವಿಧಾನಸಭಾ ಕ್ಷೇತ್ರಗಳಿಗೆ ಅಂದಾಜು ತಲಾ 10 ಕಿ.ಮೀ. ಒಳಪಡುವ ರಸ್ತೆ ಕೆಜಿಎಫ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 10 ಕಿಮೀ ಹೊರತುಪಡಿಸಿ, ಇನ್ನುಳಿದ ಕ್ಷೇತ್ರಗಳಲ್ಲಿ ಅಧೋಗತಿಯಾಗಿದೆ.
ಬಂಗಾರಪೇಟೆ ಮತ್ತು ಕೋಲಾರ ವಿಧಾನಸಭಾ ಕ್ಷೇತ್ರಗಳಿಗೆ ಒಳಪಡುವ ತಲಾ 10 ಕಿಮೀ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ನಿತ್ಯ ವಾಹನ ಸವಾರರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬೇತಮಂಗಲದಿಂದ ಬಡಮಕನಹಳ್ಳಿ ಮತ್ತು ಹುಣ್ಕುಂದ ಕ್ರಾಸ್ವರೆಗೂ ಕೆಜಿಎಫ್ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಅಲ್ಲಿಂದ ಚಾಮರಹಳ್ಳಿವರೆಗೂ ಬಂಗಾರಪೇಟೆ ಕ್ಷೇತ್ರ, ಅಲ್ಲಿಂದ ಸುಮಾರು10 ಕಿಮೀ ಕೋಲಾರ ಕ್ಷೇತ್ರಕ್ಕೆ ಸೇರುತ್ತದೆ. ಅಂದರೆ ರಸ್ತೆಯೊಂದು ಮೂರು ಬಾಗಿಲು ಎನ್ನುವಂಥ ಸ್ಥಿತಿಯಲ್ಲಿದೆ.
ಹೊಸಕೋಟೆ, ವೆಂಕಟ ಹಿರಿಕೋಟ ರಾಜ್ಯ ಹೆದ್ದಾರಿ&27ರ ರಸ್ತೆಯು ಕೋಲಾರದಿಂದ ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಿಗೆ ಕೊಂಡಿಯಾಗಿದೆ. ವಿಶೇಷವಾಗಿ ಕೆಜಿಎಫ್ ತಾಲೂಕು ಗ್ರಾಮಾಂತರ ಭಾಗಗಳಿಂದ ಜಿಲ್ಲಾ ಕೇಂದ್ರಕ್ಕೆ ಹೋಗಲು ಇದುವೇ ಪ್ರಮುಖ ರಸ್ತೆಯಾಗಿದ್ದು, ಶಾಲಾ&ಕಾಲೇಜುಗಳು, ಕಚೇರಿ, ಕಾರ್ಖಾನೆಗಳು ಸೇರಿ ಹಲವು ಕೆಲಸ ನಿಮಿತ್ತ ಜಿಲ್ಲಾ ಕೇಂದ್ರಕ್ಕೆ ಹೋಗಲು ಪ್ರತಿ ವಾಹನಗಳು ಇದೇ ರಸ್ತೆಯನ್ನು ಅವಲಂಭಿಸಬೇಕಿದೆ. ಕಳೆದ ಹತ್ತಾರು ವರ್ಷಗಳಿಂದ ಅಭಿವೃದ್ಧಿಯೇ ಕಾಣದ ರಸ್ತೆಯಿಂದಾಗಿ ನೂರಾರು ಅಪಘಾತಗಳು ನಡೆದು ಹತ್ತಾರು ಮಂದಿ ಪ್ರಾಣ ಬಿಟ್ಟಿದ್ದಾರೆ. ಇನ್ನೂ ಕೈ&ಕಾಲು ಕಳೆದುಕೊಂಡರವ ಲೆಕ್ಕವೇ ಇಲ್ಲದಂತಾಗಿದೆ.
ಕೆಜಿಎಫ್ ಕ್ಷೇತ್ರದಲ್ಲಿ ಅಭಿವೃದ್ಧಿ
ಕೆಜಿಎಫ್ ಕ್ಷೇತ್ರಕ್ಕೆ ಸೇರುವ ಸುಮಾರು 10 ಕಿಮೀ ರಸ್ತೆಯು ಬಹುತೇಕ ದುರಸ್ತಿ ಆಗಿದ್ದು, ಹುಂಕುಂದ ಗೇಟ್ನಿಂದ ಜಯಮಂಗಳ ಕ್ರಾಸ್ವರೆಗೂ ಕಳೆದ 2 ವರ್ಷಗಳ ಹಿಂದೆಯೇ ಈ ಭಾಗದ ಜನರ ಮನವಿಯಿಂದಾಗಿ ಶಾಸಕಿ ರೂಪಕಲಾ ಅವರು ರಸ್ತೆ ಅಭಿವೃದ್ಧಿ ಮಾಡಿದ್ದಾರೆ. ಕ್ಷೇತ್ರದಲ್ಲಿ ಬಾಕಿ ಇರುವ ಸುಮಾರು 4 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಿದ್ದು, ಜಯಮಂಗಲ ಕ್ರಾಸ್ನಿಂದ ಚಿಗಾರಾಪುರ ಕ್ರಾಸ್ವರೆಗೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಎಲ್ಲ ಮಾರ್ಗಗಳ ಅಭಿವೃದ್ಧಿಗೆ ಒತ್ತು
ಕೆಜಿಎಫ್ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳ ಹಿಂದೆ ಇದ್ದ ರಸ್ತೆಗಳ ದುಸ್ಥಿತಿ ಕಂಡು ಸುಸ್ಥಿತಿಗೆ ತಂದಿದ್ದೇವೆ. ಸಣ್ಣ ಹಳ್ಳಿಗಳಿಗೂ ಲಿಂಕ್ ನೀಡುವ ರಸ್ತೆಗಳೂ ಸೇರಿ ಗ್ರಾಮೀಣ ಮತ್ತು ಕೆಜಿಎಫ್ ನಗರ ಪ್ರದೇಶಗಳಲ್ಲಿನ ಪ್ರಮುಖ ರಸ್ತೆಗಳನ್ನು ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಪ್ರಮುಖವಾಗಿ, ಕೆಜಿಎಫ್ನಿಂದ ಬೇತಮಂಗಲ, ಬೆಮೆಲ್ ನಗರದಿಂದ ಬೇತಮಂಗಲ ಮೂಲಕ ಆಂಧ್ರಗಡಿ ವಿ.ಕೋಟೆವರೆಗೂ ಹಾಗೂ ಸಾಕಷ್ಟು ಹಾಳಾಗಿದ್ದ ಬೇತಮಂಗಲ&ಕೋಲಾರ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ ನಗರ ಪ್ರದೇಶದಲ್ಲೂ ಬಹುತೇಕ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ಇನ್ನೂ ಬಾಕಿ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಶಾಸಕಿ ರೂಪಕಲಾ ತಿಳಿಸಿದ್ದಾರೆ.
ಬಂಗಾರಪೇಟೆ&ಕೋಲಾರ ಕ್ಷೇತ್ರಗಳ ರಸ್ತೆಗೆ ಮುಕ್ತಿ ಯಾವಾಗ?
ಬಂಗಾರಪೇಟೆ ವ್ಯಾಪ್ತಿಗೆ ಬರುವ ಪಟ್ನ ಗ್ರಾಮದಿಂದ ಚಾಮರಹಳ್ಳಿವರೆಗಿನ ರಸ್ತೆ ಸಾಕಷ್ಟು ಹದಗೆಟ್ಟಿಗೋಗಿದ್ದು, ಯಾವುದೇ ವಾಹನಗಳು ಸಂಚರಿಸಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಅದೇ ರೀತಿ ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೋಟಿಗಾನಹಳ್ಳಿ, ಹರಲಕುಂಟೆ, ಬಟ್ರಹಳ್ಳಿ ಹಾಗೂ ಕೋಲಾರ ಬೈಪಾಸ್ ಬಳಿ ಸಹ ರಸ್ತೆ ಹಾಳಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಈ ರಸ್ತೆಯ ಸಹವಾಸವೇ ಬೇಡ ಎಂದು ಬೇತಮಂಗಲ ದಿಂದ ಕೋಟಿಲಿಂಗ ಬಂಗಾರಪೇಟೆ ಮೂಲಕ, ಅಥವಾ ಇದೀಗ ಬೆಂಗಳೂರಿಗೆ ಹೋಗುವವರು ಬೆಂಗಳೂರು ಚೆನ್ನೆ$ ಎಕ್ಸಪ್ರೆಸ್ ಕಾರಿಡಾರ್ ರಸ್ತೆಯ ಮೂಲಕ ಸಂಚರಿಸುವಂತಾಗಿದೆ.