

ಶಿವಮೊಗ್ಗ: ಮಲೆನಾಡು-ಕರಾವಳಿ ಸಹಿತ ಕೆಲ ಜಿಲ್ಲೆಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಪ್ರವಾಹ ಭೀತಿ ಉಂಟಾಗಿದೆ. ಶಿವಮೊಗ್ಗದಲ್ಲೂ ವರುಣನ ಆರ್ಭಟ ಜೋರಾಗಿದ್ದು, ಸೊರಬ ತಾಲೂಕಿನ ದೇವತಿಕೊಪ್ಪದಲ್ಲಿ ಕೆರೆ ಏರಿ ಮತ್ತು ಏರಿ ಮೇಲಿನ ರಸ್ತೆ ಯಾವ ಕ್ಷಣದಲ್ಲಾದರೂ ಕುಸಿಯಬಹುದು.
ರಸ್ತೆಯ ಒಂದು ಭಾಗದಲ್ಲಿ ಈಗಾಗಲೇ ಕುಸಿದಿದ್ದು, ಕೆರೆಏರಿ ಒಡೆದರೆ ಮೂರರಿಂದ ನಾಲ್ಕು ಗ್ರಾಮಗಳು ಜಲಾವೃತಗೊಳ್ಳುವ ಆತಂಕ ಇದೆ.
ಸಾಗರ, ಹೊಸನಗರ, ತೀರ್ಥಹಳ್ಳಿ ಹಾಗೂ ಸೊರಬ ತಾಲೂಕಿನಲ್ಲಿ ಮುಂಗಾರು ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ನದಿ-ಕೆರೆಗಳು ತುಂಬಿದ್ದು, ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದೆ. 150 ಎಕರೆ ವಿಸ್ತೀರ್ಣದ, ಸೊರಬ ತಾಲೂಕು ಅಂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವತಿಕೊಪ್ಪ ಗ್ರಾಮದ ದೊಡ್ಡಕೆರೆಯೂ ಕೆರೆಯೂ ಭರ್ತಿಯಾಗಿದ್ದು, ನಿರಂತರ ಮಳೆಗೆ ಕೆರೆ ಏರಿ ಮೇಲಿನ ರಸ್ತೆಯ ಒಂದು ಭಾಗ ಕುಸಿದಿದೆ.
ಒಂದು ವೇಳೆ ಕೆರೆ ಏರಿ ಹೊಡೆದರೆ ಮೂರರಿಂದ ನಾಲ್ಕು ಗ್ರಾಮಗಳು ಜಲಾವೃತಗೊಳ್ಳುವ ಸಾಧ್ಯತೆಯಿದೆ. ಜಮೀನುಗಳೂ ಜಲಾವೃತಗೊಳ್ಳಲಿದೆ. ಸ್ಥಳೀಯರು ಜೀವ ಭೀತಿಯಲ್ಲಿದ್ದಾರೆ. ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟವರು ದುರಸ್ತಿ ಕಾರ್ಯ ಸೇರಿದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.