

ಸವಣೂರ: ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಬ್ರಿಜ್ ಮೇಲಿಂದ ಬಿದ್ದು ಮೃತಪಟ್ಟ ಘಟನೆ ಸವಣೂರ-ಶಿಗ್ಗಾಂವಿ ರಸ್ತೆಯ ಗುಂಡೂರು ಗ್ರಾಮದ ಹತ್ತಿರ ಸೋಮವಾರ ಸಂಭವಿಸಿದೆ.
ಗುಂಡೂರ ನಿವಾಸಿ, ರೈತ ಪ್ರವೀಣ ರಾಮಣ್ಣ ತೋಟದ (30) ಮೃತಪಟ್ಟವ. ಪ್ರವೀಣ ಭಾನುವಾರ ತಡರಾತ್ರಿ ಮನೆಯಿಂದ ಯಾವುದೋ ಕೆಲಸದ ನಿಮಿತ್ತ ಗುಂಡೂರು ಗ್ರಾಮದಿಂದ ಶಿಗ್ಗಾಂವಿಗೆ ಬೈಕ್ನಲ್ಲಿ ತೆರಳುತ್ತಿದ್ದ ಎನ್ನಲಾಗಿದೆ. ಮಾರ್ಗಮಧ್ಯೆ ಬ್ರಿಜ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದನ್ನು ಅರಿಯದೇ ರಸ್ತೆಯ ಮಧ್ಯದ ಮಣ್ಣುಗುಡ್ಡೆಯ ಮೇಲಿಂದ ಬೈಕ್ ಸಮೇತ ಬ್ರಿಜ್ ಗೋಡೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಬೈಕ್ ಬ್ರಿಜ್ ಮೇಲೆ ನೇತಾಡುತ್ತಿರುವುದು ಹಾಗೂ ಕೆಳಗಿದ್ದ ಶವ ಕಂಡ ಸ್ಥಳೀಯರು 112ಗೆ ಕರೆ ಮಾಡಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಮೇಘರಾಜ ದೊಡ್ಡಮನಿ ಹಾಗೂ ಸಿಬ್ಬಂದಿ ಪರಿಶೀಲನೆ ಕೈಗೊಂಡು ತನಿಖೆ ಕೈಗೊಂಡಿದ್ದಾರೆ. ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ರೈತ ಪ್ರವೀಣ ಅವಿವಾಹಿತನಾಗಿದ್ದು, ತಂದೆ, ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಬ್ರಿಜ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕುರಿತು ನಿಯಮಾನುಸಾರ 100 ಮೀಟರ್ ಅಂತರದಲ್ಲಿ ಸೂಚನಾ ಫಲಕ ಅಳವಡಿಸಿರಲಿಲ್ಲ. ಅಲ್ಲದೆ, ಪರ್ಯಾಯವಾಗಿ ರಸ್ತೆಯನ್ನು ಕಾಮಗಾರಿ ಸ್ಥಳದ ಪಕ್ಕದಲ್ಲೇ ಮಾಡಲಾಗಿದೆ. ಕೇವಲ 20ರಿಂದ 30 ಅಡಿ ಅಂತರದಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ರಾತ್ರಿಯಾಗಿರುವುದರಿಂದ ಫಲಕ ಹಾಗೂ ಪರ್ಯಾಯ ರಸ್ತೆ ಕಾಣಿಸದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ಒಂದು ಜೀವ ಬಲಿಯಾಗಿದೆ. ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿದಿದ್ದರೂ ಸ್ಥಳಕ್ಕೆ ಭೇಟಿ ನೀಡಲಿಲ್ಲ.