

ಚಿಕ್ಕಮಗಳೂರು: ನಮ್ಮ ಸಂಸ್ಥೆಯ ಗಾಯಕಿ ಅಮೇರಿಕಾದ ರಿಚ್ಮಂಡ್‌ನಲ್ಲಿ ನಡೆಯುವ ಅಕ್ಕ ಸಮ್ಮೇಳನದಲ್ಲಿ ಗಾಯನ ನೀಡಲು ತೆರಳುತ್ತಿರುವುದು ಹೆಮ್ಮೆಯ ಸಂಗತಿ. ಇದು ಪರಿಶ್ರಮದ ಸಂಗೀತ ಸಾಧನೆಗೆ ಸಂದ ಫಲ ಎಂದು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಹೇಳಿದರು.
ಗಾಯನ ಕಾರ್ಯಕ್ರಮ ನೀಡಲು ಅಮೇರಿಕಾಕ್ಕೆ ತೆರಳುತ್ತಿರುವ ಗಾಯಕಿ ರಶ್ಮಿ ಮಂಜುನಾಥ್ ಅವರಿಗೆ ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಆರಾಧನಾ ಸಂಗೀತ ಶಾಲೆಯಲ್ಲಿ ಸುಗಮ ಸಂಗೀತ ಗಂಗಾ ಸಂಸ್ಥೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾರೀರವನ್ನು ಕಾಪಾಡಿಕೊಳ್ಳುವುದರೊಂದಿಗೆ ಮೈಸೂರು ವಿವಿಯಲ್ಲಿ ಸಂಗೀತ ಉಪನ್ಯಾಸಕಿಯಾಗಿದ್ದುಕೊಂಡು ಸುಗಮ ಸಂಗೀತದ ಬಗ್ಗೆಯೇ ಪಿಎಚ್‌ಡಿ ಮಾಡುತ್ತಿರುವ ರಶ್ಮಿ ತೊಗರಿಹಂಕಲ್‌ನAತಹ ಪುಟ್ಟ ಹಳ್ಳಿಯಿಂದ ಬಂದವರು. ಸ್ವಯಂ ಸಾಧನೆ ಮತ್ತು ಗುರು ಮಾರ್ಗದರ್ಶನ ಅವರನ್ನು ಈ ಯಶಸ್ಸು, ಗೌರವಕ್ಕೆ ಭಾಜನರನ್ನಾಗಿಸಿದೆ ಎಂದು ಹೇಳಿದರು.
ಸುಗಮ ಸಂಗೀತ ಗಂಗಾದ ಅರವಿಂದ ದೀಕ್ಷಿತ್ ಮಾತನಾಡಿ, ನಮ್ಮ ನಡುವೆ ಓದಿ ಕಲಿತವರೊಬ್ಬರು ಅಕ್ಕ ಸಮ್ಮೇಳನಕ್ಕೆ ತೆರಳುತ್ತಿರುವುದು ಸಂಸ್ಥೆಗೆ ಸಂದ ಗೌರವ ಎಂದರು.
ಗಾಯಕ ನಾಗರಾಜರಾವ್ ಕಲ್ಕಟ್ಟೆ ಮಾತನಾಡಿ, ರಶ್ಮಿ ಎಂದೂ ಅಹಂಕಾರಿಯಾಗಲೇ ಇಲ್ಲ. ಕೀರ್ತಿ, ಹೆಸರು ಅವರನ್ನು ಅಪ್ಪಿದಾಗಲೂ ಅವರು ಸಂಗೀತ ಸಾಧನೆಯೇ ಸರ್ವಸ್ವ ಎಂದು ನಂಬಿ ವಿನಯದಿಂದ ನಡೆದವರು ಎಂದು ಹೇಳಿದರು.
ಸುಗಮ ಸಂಗೀತ ಗಂಗಾದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಮತ್, ಖಜಾಂಚಿ ಸುಮಾ ಪ್ರಸಾದ್, ಪ್ರಮುಖರಾದ ಪ್ರೀತಿ, ಶಾರದಾ ಗಿರೀಶ್, ದೀಪ್ತಿ, ವೀಣಾ ಅರವಿಂದ್, ಶುಭಾ ಮತ್ತಿತರರಿದ್ದರು.