

ಹುಬ್ಬಳ್ಳಿ: ಚಿತ್ರ ನಟ ದರ್ಶನ್ ತೂಗುದೀಪ ಅವರು ಚಿತ್ರರಂಗದ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕೇರಿದ್ದಾರೆ. ಅವರು ಮಾದರಿಯಾಗಿ ನಡೆದುಕೊಳ್ಳಬೇಕು. ದರ್ಶನ್ ಅವರನ್ನು ಈ ಹಿಂದೆ ರಾಜ್ಯ ಸರ್ಕಾರ ರೈತರ ರಾಯಭಾರಿಯನ್ನಾಗಿ ಮಾಡಿತ್ತು. ಆದರೆ, ದರ್ಶನ್ ಅವರ ಹೆಸರು ಕೊಲೆ ಪ್ರಕರಣವೊಂದರಲ್ಲಿ ಕೇಳಿ ಬಂದಿದ್ದು, ಸರ್ಕಾರ ರಾಯಭಾರಿಗಳನ್ನು ನೇಮಿಸುವ ಮುನ್ನ ಪರಾಮರ್ಶೆ ಮಾಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣವೊಂದರಲ್ಲಿ ದರ್ಶನ್ ಹೆಸರು ಕೇಳಿ ಬಂದಿರುವುದರಿಂದ ಈ ಹಿಂದೆ ಕೃಷಿಗೆ ಸಂಬಂಧಿಸಿದಂತೆ ಅವರನ್ನು ರಾಯಭಾರಿಯನ್ನಾಗಿ ಸರ್ಕಾರ ಮಾಡಿತ್ತು. ಇದೀಗ ಇಂತಹ ಘಟನೆಯಿಂದಾಗಿ ಸರ್ಕಾರಕ್ಕೂ ಇರಿಸುಮುರುಸು ಆಗುತ್ತಿದೆ ಎಂದರು.
ಯಾವುದೇ ನಟರಾಗಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಕೆಲಸವನ್ನು ಮಾಡಬೇಕು. ಆದರೆ, ಇತ್ತಿಚಿನ ಬೆಳವಣಿಗೆಗಳನ್ನು ಗಮನಿಸಿದರೆ ರಾಜ್ಯವೇ ತಲೆತಗ್ಗಿಸುವಂತಹ ಘಟನೆಗಳು ನಡೆಯುತ್ತಿವೆ. ಯಾರನ್ನು ನಂಬಬೇಕು, ಬಿಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಮುಂದಾದರೂ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ಸರಿ ದಾರಿಯಲ್ಲಿ ನಡೆದು ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದರು.