

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರ ಪಾಲಿಕೆ ಸದಸ್ಯರ ಕುಂದು-ಕೊರತೆ ಆಲಿಸುವ ನಿಟ್ಟಿನಲ್ಲಿ ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್ ರಾಮಪ್ಪ ಬಡಿಗೇರ ಅಧ್ಯಕ್ಷತೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲೂ ನೀರಿನ ಸಮಸ್ಯೆಗಳೇ ಪ್ರತಿಧ್ವನಿಸಿದ್ದು ವಿಶೇಷವಾಗಿತ್ತು.
ನೀರು ಸರಬರಾಜು ವ್ಯವಸ್ಥೆಯನ್ನು ಎಲ್ ಆ್ಯಂಡ್ ಟಿಗೆ ವಹಿಸಿದ ಬಳಿಕ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಸರಿಯಾದ ಸಮಯಕ್ಕೆ ದುರಸ್ತಿ ಕಾರ್ಯ ನಡೆಸುವುದಿಲ್ಲ.. ದೂರುಗಳಿಗೆ ಸ್ಪಂದನೆ ಇಲ್ಲ..ಹೀಗೆ ಹತ್ತು ಹಲವು ಸಮಸ್ಯೆಗಳಿದ್ದರೂ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಪಾಲಿಕೆ ಸದಸ್ಯರು ದೂರಿದರು.
ಮೇಯರ್ ರಾಮಪ್ಪ ಬಡಿಗೇರ ಮಾತನಾಡಿ, ವಾರ್ಡ್ಗಳಲ್ಲಿನ ಕುಂದು-ಕೊರತೆ ಗಮನಿಸಿ ಪರಿಹರಿಸಲು ಕ್ರಮ ವಹಿಸಲಾಗುವುದು. ಪೈಪ್ಲೈನ್ಗೆ ಅಗೆದ ರಸ್ತೆ ಸರಿಪಡಿಸಿದ್ದನ್ನು ಅಧಿಕಾರಿಗಳು ಪರಿಶೀಲಿಸಿದ ಬಳಿಕವೇ ಹಣ ಪಾವತಿ ಮಾಡಬೇಕು. ಅಗೆದ ರಸ್ತೆಗಳಿಗೆ ಮೊದಲು ಸರಿಯಾಗಿ ಮಣ್ಣಿನಿಂದ ಮುಚ್ಚಬೇಕು. ಕೆಲ ತಿಂಗಳ ನಂತರ ಡಾಂಬರೀಕರಣ ಅಥವಾ ಕಾಂಕ್ರೀಟ್ ಮಾಡಬೇಕು. ಇದರಿಂದ ರಸ್ತೆ ಕುಸಿತ ತಪ್ಪಿಸಬಹುದು. ಈ ನಿಯಮವನ್ನು ಅಧಿಕಾರಿಗಳು ಪಾಲಿಸಬೇಕು ಎಂದು ಸೂಚಿಸಿದರು.
ಸದಸ್ಯ ವಿಜಯಾನಂದ ಶೆಟ್ಟಿ ಮಾತನಾಡಿ, ಚೈತನ್ಯ ನಗರದಲ್ಲಿ ಸಾರ್ವಜನಿಕ ಟ್ಯಾಂಕ್ ಸ್ವಚ್ಛಗೊಳಿಸಲು ಹೇಳಿ 3-4 ತಿಂಗಳಾದರೂ ಮಾಡಿಲ್ಲ. ವಾರ್ಡ್ನಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಅದಕ್ಕೂ ಪೂರ್ವ ಪೈಪ್ಲೈನ್ ಅಳವಡಿಕೆ ಮಾಡುವಂತೆ ಸೂಚಿಸಲಾಗಿದೆ. ಆದಾಗ್ಯೂ ಅಧಿಕಾರಿಗಳು ಕಾಮಗಾರಿ ಆರಂಭಿಸಿಲ್ಲ. ರಸ್ತೆ ಮಾಡಿದ ಮೇಲೆ ಲೈನ್ ಅಳವಡಿಕೆ ಮಾಡಲು ಆರಂಭಿಸುತ್ತಾರೆ ಎಂದು ದೂರಿದರು.
ಮಯೂರ ಮೋರೆ ಮಾತನಾಡಿ, ಹೊಸ ನಳದ ಸಂಪರ್ಕಕ್ಕೆ 5-6 ಮೀ. ಮಾತ್ರ ಪೈಪ್ಲೈನ್ ಮಾಡುತ್ತೇವೆ. ಉಳಿದಿದ್ದನ್ನು ಜನರೇ ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಹೇಳುತ್ತಿದ್ದಾರೆ. ಅಪಾರ್ಟ್ಮೆಂಟ್ಗಳಲ್ಲಿ ಪ್ರತಿ ಮನೆಗಳಿಗೆ ಪ್ರತ್ಯೇಕ ಸಂಪರ್ಕ ನೀಡಬೇಕು ಎಂದರು. ಇದಕ್ಕೆ ಧನಿಗೂಡಿಸಿದ ಕವಿತಾ ಕಬ್ಬೇರ, 2020-2021ನೇ ಸಾಲಿನ ನಂತರ ನಿರ್ಮಾಣವಾದ ಮನೆಗಳಿಗೆ ಪೈಪ್ಲೈನ್ ಅಳವಡಿಸಲು ಎಲ್ ಆ್ಯಂಡ್ ಟಿ ತಕರಾರು ಮಾಡುತ್ತಿದೆ.
ಸದಸ್ಯ ಶಿವು ಹಿರೇಮಠ ಮಾತನಾಡಿ, ಪೈಪ್ಲೈನ್ ಅಳವಡಿಕೆ ನಂತರ ರಸ್ತೆ ದುರಸ್ತಿ ಯಾವ ರೀತಿ ಇರಬೇಕು ಎಂಬುದನ್ನು ಮೊದಲು ಅಧಿಕಾರಿಗಳು ತಿಳಿಯಲಿ. ಯಾವ ಸ್ಥಳದಲ್ಲೂ ರಸ್ತೆ ದುರಸ್ತಿ ಕಾರ್ಯ ಸರಿಯಾಗಿಲ್ಲ. ಒಂದು ಬಿಲ್ ಸಮಸ್ಯೆ ಪರಿಹರಿಸಲು 6-7 ತಿಂಗಳಾಗುತ್ತಿದೆ. ಈ ಸಭೆಯಲ್ಲಿ ಚಚಿರ್ತವಾದ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸವಾಗಬೇಕೆ ಹೊರತು, ಕಾಟಾಚಾರದ ಸಭೆ ಆಗಬಾರದು ಎಂದರು. ಇದಕ್ಕೆ ವಿಪಕ್ಷ ನಾಯಕ ರಾಜಶೇಖರ ಕಮತಿ ಸಹ ಸಮ್ಮತಿಸಿದರು.
ಉಳಿದಂತೆ ಬಡಾವಣೆಗಳಲ್ಲಿನ ಕಸ ವಿಲೇವಾರಿ, ಸ್ವಚ್ಛತೆ, ಅಗತ್ಯಕ್ಕೆ ತಕ್ಕಂತೆ ಟಿಪ್ಪರ್ ವಿತರಣೆ, ಪೌರ ಕಾಮಿರ್ಕರ ನೇಮಕ ಸೇರಿ ವಿವಿಧ ವಿಷಯಗಳು ಕುರಿತು ಸದಸ್ಯರಾದ ಶಂಭುಗೌಡ ಸಾಲಮನಿ, ರತ್ನಾಬಾಯಿ ನಾಝರೆ, ಇತರರು ಗಮನ ಸೆಳೆದರು.
ಸಹಾಯಕ ಆಯುಕ್ತ ಇ. ತಿಮ್ಮಪ್ಪ, ಉಮ ಮೇಯರ್ ದುರ್ಗಮ್ಮ ಬಿಜವಾಡ, ಸದಸ್ಯರು, ಅಧಿಕಾರಿಗಳು, ಇತರರು ಇದ್ದರು.