

ಭಟ್ಕಳ: ತಾಲೂಕಿನ ಬೆಳಕೆ ಎಂಡೋಸಲ್ಫಾನ್ ಪೀಡಿತ ಅಂಗವಿಕಲ ಮಕ್ಕಳ ಆರೈಕೆಗೆ ಸೇವಾ ಕೇಂದ್ರ (ಡೇ ಕೇರ್ ಸೆಂಟರ್) ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ವೃಕ್ಷಲಕ್ಷ ಆಂದೋಲನದಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಯಿತು.
ಮೀನುಗಾರಿಕೆ ಇಲಾಖೆ ಮೂಲಕ ಕರಾವಳಿ ಮಲೆನಾಡಿನ ನದಿಗಳಲ್ಲಿ ಈಗಾಗಲೇ ಗುರುತಿಸಿರುವ 15 ಮತ್ಸೃಧಾಮಗಳ ಅಧ್ಯಯನ ವರದಿಯನ್ನು ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಅಶೀಸರ ಮೀನುಗಾರಿಕಾ ಸಚಿವರಿಗೆ ಸಲ್ಲಿಸಿದರು.
ವಿಜ್ಞಾನಿ ಡಾ. ಪ್ರೀತಂ ಅವರು ಈಗಾಗಲೇ 11 ಸ್ಥಳಗಳನ್ನು ಇಲಾಖೆ 2012ರಲ್ಲೇ ಘೋಷಣೆ ಮಾಡಿದೆ ಎಂಬ ಮಾಹಿತಿ ನೀಡಿದರು. ಭಟ್ಕಳ ತಾಲೂಕಿನ ಬೆಳಕೆಯ ಎಂಡೋಸಲ್ಫಾನ್ ಪೀಡಿತರ ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳ ಸಲುವಾಗಿ ಆರೈಕೆ ಕೇಂದ್ರ (ಡೇ ಕೇರ್ ಸೆಂಟರ್) ಪ್ರಾರಂಭಿಸಬೇಕು. ಅಂಗವಿಕಲ ಮಕ್ಕಳಿಗೆ ಮಾಸಾಶನ ನೀಡಬೇಕು ಎಂದು ಅನಂತ ಹೆಗಡೆ ಅಶೀಸರ ಸಚಿವರ ಗಮನ ಸೆಳೆದರು.
2010-11ರಲ್ಲಿ ಬೆಳಕೆಯಲ್ಲಿ ಕೈಗೊಂಡ ಅಧ್ಯಯನ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಸಚಿವ ಮಂಕಾಳ ವೈದ್ಯ ಅವರು, ಬೆಳಕೆ ಎಂಡೋ ಪೀಡಿತರ ವಿಶೇಷ ಮಕ್ಕಳಿಗೆ ಡೇ ಕೇರ್ ಸೆಂಟರ್ ಆರಂಭಿಸುವುದಾಗಿ ಭರವಸೆ ನೀಡಿದರು. ಉ.ಕ. ಜಿಲ್ಲೆಯ ಅರಣ್ಯ ಅಭಿವೃದ್ಧಿ ಬಗ್ಗೆ ಶೀಘ್ರ ಭಟ್ಕಳದಲ್ಲಿ ಜಿಲ್ಲೆಯ ಅರಣ್ಯ ಅಧಿಕಾರಿಗಳ ಸಭೆ ನಡೆಸುತ್ತೇವೆ ಎಂದು ವೃಕ್ಷಲಕ್ಷ ನಿಯೋಗಕ್ಕೆ ತಿಳಿಸಿದ್ದಾರೆ.