

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಧಾನಮಂತ್ರಿ ಸ್ವ ನಿಧಿ ಯೋಜನೆಯಡಿ ಗ್ರಾಮೀಣ ಭಾಗದ ಪತ್ರಿಕಾ ವಿತರಕರನ್ನು ಸೇರಿಸುವಂತೆ ಆಗ್ರಹಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಚಿವರನ್ನು ಭೇಟಿಯಾದ ಧಾರವಾಡ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಸದಸ್ಯರು, ಈಗಾಗಲೆ ಪತ್ರಿಕಾ ವಿತರಕರನ್ನು ಪ್ರಧಾನಮಂತ್ರಿ ಸ್ವ ನಿಧಿ ಯೋಜನೆಗೆ ಒಳಪಡಿಸಿದ್ದರಿಂದ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟ ಸಂತಸ ವ್ಯಕ್ತಪಡಿಸಿ ಸನ್ಮಾನಿಸಿದರು.
ಬಳಿಕ ಸಚಿವರೊಂದಿಗೆ ಚರ್ಚಿಸಿದ ಒಕ್ಕೂಟದ ಸದಸ್ಯರು, ಯೋಜನೆ ಶಹರ, ಪಟ್ಟಣ ಪ್ರದೇಶ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ವಿತರಕರಿಗೆ ಮಾತ್ರ ಸಿಗುವಂತಾಗಿದ್ದು, ಗ್ರಾಮೀಣದವರು ವಂಚಿತರಾಗಿದ್ದಾರೆ. ಗ್ರಾಮೀಣದಲ್ಲೂ ಸಾಕಷ್ಟು ಬಡ ಜನರು ಹಲವು ವರ್ಷಗಳಿಂದ ಪತ್ರಿಕಾ ವಿತರಣೆಯನ್ನು ಮುಖ್ಯ ವೃತ್ತಿಯನ್ನಾಗಿ ಮಾಡಿಕೊಂಡು ಉಪಜೀವನ ನಡೆಸುತ್ತಿದ್ದಾರೆ. ಅವರನ್ನೂ ಪ್ರಧಾನಮಂತ್ರಿ ಸ್ವ ನಿಧಿ ಯೋಜನೆಯಡಿ ಒಳಪಡಿಸಿ ಸೌಲಭ್ಯ ಕಲ್ಪಿಸಬೇಕು. ಎಲ್ಲ ಪತ್ರಿಕಾ ವಿತರಕರ ಹಿತದೃಷ್ಟಿಯಿಂದ ರಾಷ್ಟ್ರೀಯ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸಿ ವಿವಿಧ ಯೋಜನೆಗಳನ್ನು ನೀಡಿ ವಿತರಕರಿಗೆ ಬದುಕು ಕಟ್ಟಿಕೊಳ್ಳಲು ಅನುಕೂಲ ಕಲ್ಪಿಸುವಂತೆ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸಿದ ಸಚಿವರು, ಈ ಕುರಿತು ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚಿಸಿ ಆದಷ್ಟು ಬೇಗನೆ ಗ್ರಾಮೀಣ ಭಾಗದ ಪತ್ರಿಕಾ ವಿತರಕರನ್ನು ಯೋಜನೆಗೆ ಸೇರಿಸುವಂತೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಧಾರವಾಡ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ ಹಲಗಿ, ಚಂದ್ರಶೇಖರ ಬೇಲೂರ, ಶಿವರಾಮ ಶಿರಗುಪ್ಪಿ, ಶಿವಪ್ರಭು ಈಸರಗೊಂಡ, ಶ್ರೀಶೈಲ ಗೌರಿಮಠ, ನಾಗರಾಜ ಕುಲಕರ್ಣಿ, ರಮೇಶ ಓರಣಕರ, ಬಸವರಾಜ ಗೊಂದಿ, ಶ್ರೀಧರ ಪಾಸ್ತೆ, ಕೃಷ್ಣಾ ಕುಲಕರ್ಣಿ, ಇತರರು ಇದ್ದರು.