

ಚಿಕ್ಕಮಗಳೂರು: ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆಗೆ ಹಾಗೂ ಬುದ್ಧ ವಿಹಾರ ಕಾರ್ಯಚಟುವಟಿಕೆಗೆ ನಿವೇಶನ ಮಂಜೂರು ಮಾಡುವಂತೆ ಜಿಲ್ಲಾಡಳಿತ, ಸರ್ಕಾರ ಮತ್ತು ಶಾಸಕರಿಗೆ ಮನವಿ ನೀಡಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಬಿ ನಿಂಗಯ್ಯ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಸಂಸ್ಥೆಗೆ ಜಾಗ ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ, ಜಿಲ್ಲಾ ಸಚಿವರಿಗೆ ಹಾಗೂ ಕ್ಷೇತ್ರದ ಶಾಸಕರಿಗೆ ಮನವಿ ನೀಡಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಜಾಗ ಮಂಜೂರು ಮಾಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ದಲಿತ ಸಮುದಾಯ ದೊಡ್ಡ ಸಮುದಾಯವಾಗಿದ್ದು, ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಸಮುದಾಯಿಕ ಕಾರ್ಯಚಟುವಟಿಕೆಗಳಿಗೆ ಜಾಗ ಮಂಜೂರು ಮಾಡುವಂತೆ ಡಾ. ಬಿ.ಆರ್ ಅಂಬೇಡ್ಕರ್ ಅನುಯಾಯಿಗಳಾದ ನಾವು ಮನವಿ ನೀಡಿದ ಮೇರೆಗೆ ಜಾಗ ಗುರುತಿಸಿ ಮಂಜೂರು ಮಾಡಿಸಿಕೊಡುವುದಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಇದುವರೆಗೆ ಜಾಗ ಮಂಜೂರು ಮಾಡಿಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಸಬಾ ಹೋಬಳಿ ಗವನಹಳ್ಳಿ ಸರ್ವೆ ನಂಬರ್ ೯೩ ರಲ್ಲಿ ೧೩ ಎಕರೆ ಜಾಗವನ್ನು ಗುರುತಿಸಿದ್ದು, ಈ ಜಾಗವನ್ನು ಜಿಲ್ಲಾ ಕೇಂದ್ರದಲ್ಲಿ ಬುದ್ಧ ವಿಹಾರ ಮಾಡಲು ಮಂಜೂರು ಮಾಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಈಗಾಗಲೇ ಮೂಡಿಗೆರೆ ತಾಲೂಕಿನಲ್ಲಿ ೧೦ ಎಕರೆ ಜಾಗವನ್ನು ಈ ಉದ್ದೇಶಕ್ಕೆ ಮೀಸಲಿಡಲಾಗಿದೆ. ಇದೇ ಮಾದರಿಯಲ್ಲಿ ಉಳಿದ ೮ ತಾಲೂಕು ಕೇಂದ್ರಗಳಲ್ಲಿ ನಿವೇಶನ ಮಂಜೂರು ಮಾಡಬೇಕು. ಜೊತೆಗೆ ಜಿಲ್ಲಾ ಅಂಬೇಡ್ಕರ್ ಸಮುದಾಯ ಭವನ ನಿರ್ವಹಣೆಯನ್ನು ಸಂಸ್ಥೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಶೋಷಿತ, ತುಳಿತಕ್ಕೊಳ್ಳಗಾದ, ಬಡವರಿಗಾಗಿ ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಸಂಸ್ಥೆ ಸ್ಥಾಪಿಸಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಅಂಬೇಡ್ಕರ್ ಕುರಿತ ಗ್ರಂಥಾಲಯ, ಸಮುದಾಯದ ಜನರ ಆರೋಗ್ಯ ಚಿಕಿತ್ಸೆ ಜೊತೆಗೆ ದಲಿತರಿಗೆ ಮಂಜೂರಾದ ಜಮೀನಿನ ಬಗ್ಗೆ ವಿವರ ಪಡೆದು ದಲಿತರ ಸಮಸ್ಯೆಗಳ ನಿವಾರಣೆಗೆ ಶ್ರಮಿಸುವುದು ಸಂಸ್ಥೆ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಸಂಸ್ಥೆ ಕೋಶಾಧ್ಯಕ್ಷ ಎಂ.ಎಸ್.ಆನಂತ್, ದಲಿತ ಸಂಘಟನೆ ಮುಖಂಡರಾದ ಮರ್ಲೆ ಅಣ್ಣಯ್ಯ, ಹೊನ್ನೇಶ್, ಹರಿಯಪ್ಪ, ಹುಣಸೇಮಕ್ಕಿ ಲಕ್ಷ್ಮಣ, ಅನಿಲ್‌ಕುಮಾರ್ ಮತ್ತಿತರರಿದ್ದರು.