ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಮನವಿ

savanur students manavi
Published on

ಸವಣೂರ: ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ ತರಗತಿಗಳು ಸಮರ್ಪಕವಾಗಿ ನಡೆಯುವಂತೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ ಬುಧವಾರ ಪಟ್ಟಣದ ಶ್ರೀಮತಿ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ್ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನ. 23ರಿಂದ ತರಗತಿ ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಹಾಗೂ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಿಗೆ ಅಧ್ಯಯನ ಮಾಡಲು ಬರುತ್ತಿದ್ದಾರೆ. ಉಪನ್ಯಾಸಕರು ತರಗತಿ ಬಹಿಷ್ಕರಿಸಿರುವುದರಿಂದ ಕಲಿಕೆಗೆ ತೊಂದರೆಯಾಗಿ ವಿದ್ಯಾರ್ಥಿಗಳು ಪಾಠಗಳಿಂದ ದೂರ ಉಳಿಯುವಂತಾಗಿದೆ. ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, ಭವಿಷ್ಯದ ಪರಿಸ್ಥಿತಿ ಏನು ಎನ್ನುವಂಥ ಚಿಂತೆ ಕಾಡುತ್ತಿದೆ. ಸರ್ಕಾರಿ ಕಾಲೇಜುಗಳಿಗೆ ಕಾಯಂ ಉಪನ್ಯಾಸಕರನ್ನು ನೇಮಕಗೊಳಿಸಬೇಕು. ರಾಜ್ಯದ ಅತಿಥಿ ಉಪನ್ಯಾಸಕರ ಪರವಾಗಿ ನೀತಿ ನಿಯಮಾವಳಿಗಳನ್ನು ರೂಪಿಸಿ ಸೇವಾ ಭದ್ರತೆ ಒದಗಿಸಿ ಸಕಾಲಕ್ಕೆ ವೇತನ ನೀಡಬೇಕು. ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಶೀಘ್ರ ಬಗೆಹರಿಸಲು ಸರ್ಕಾರ ಮುಂದಾಗಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳಾದ ಶ್ರೀನಾಥ ಅತ್ತಿಗೇರಿ, ಸಂದೀಪ ಅತ್ತಿಗೇರಿ, ಸುದೀಪ ಬಾಣದ, ನಂದೀಶ ಮಟಿಗಾರ, ಮಲ್ಲಿಕಾರ್ಜುನ ಚಿಲ್ಲೂರ, ರಾಜು ಕುಲಕರ್ಣಿ, ನಿರಂಜನ ನೀರಲಗಿ, ಗಣೇಶ ಗುರಾಣಿ, ತಿರುಮಲೇಶ ಬೇವಿನಹಳ್ಳಿ, ವಿಜಯಕುಮಾರ ವೆರ್ಣೆಕರ, ನೇತ್ರಾವತಿ ಲಮಾಣಿ, ಗೌತಮಿ ಸಂಶಿ, ಶಂಕ್ರಮ್ಮ ಬೆಂಡಿಗೇರಿ, ವಿದ್ಯಾ ಪಾಟೀಲ, ಸ್ವಾತಿ ಪಾಟೀಲ, ಮಲ್ಲಿಕ್ ಮಡ್ಡರಕಿ, ಯಲ್ಲಮ್ಮ ಮಾನೆ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net