ಹಾನಗಲ್ಲ ತಾಲೂಕಿಗೆ ರೈಲು ನಿಲ್ದಾಣ ಕಲ್ಪಿಸಲು ಮನವಿ

A request to establish a railway station in Hanagalla taluk
Published on

ಹಾನಗಲ್ಲ: ತಾಳಗುಪ್ಪಶಿರಸಿ-ಹುಬ್ಬಳ್ಳಿ ಹೊಸ ರೈಲು ಮಾರ್ಗ ಆರಂಭಿಸಲು ಪ್ರಾಥಮಿಕ ಸಮೀಕ್ಷೆ ಕೈಗೊಳ್ಳಲಾಗಿದ್ದು, ಈ ಮಾರ್ಗದಡಿ ಹಾನಗಲ್ಲ ತಾಲೂಕಿನಲ್ಲಿಯೂ ರೈಲು ನಿಲ್ದಾಣ ಕಲ್ಪಿಸುವಂತೆ ಒತ್ತಾಯಿಸಿ ಶಾಸಕ ಶ್ರೀನಿವಾಸ ಮಾನೆ ಹುಬ್ಬಳ್ಳಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ತಾಳಗುಪ್ಪಹುಬ್ಬಳ್ಳಿ 167 ಕಿ.ಮೀ. ರೈಲು ಮಾರ್ಗದ ಪ್ರಾಥಮಿಕ ಸಮೀಕ್ಷೆ ಪೂರ್ಣಗೊಂಡಿದೆ. ಪ್ರಾಥಮಿಕ ಸಮೀಕ್ಷಾ ವರದಿಯಲ್ಲಿ ತಾಳಗುಪ್ಪ, ಕವಚೂರು, ಸಿದ್ದಾಪುರ, ಮಂಡಿಕೊಪ್ಪ, ತಾಳಗೊಂಡ, ಬಿದರಹಳ್ಳಿ, ಶಿರಸಿ, ಅಂಚಳ್ಳಿ, ಹರಗನಹಳ್ಳಿ, ಪಾಳಾ, ಸಿದ್ದನಕೊಪ್ಪ, ಮುಂಡಗೋಡ, ಹುನಗುಂದ, ತಡಸ, ಬೆಳಗಲಿ, ಮಾರ್ಗದ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತಾಪಿತ ರೈಲು ಮಾರ್ಗದ ಹಳಿ ಹಾನಗಲ್ಲ ತಾಲೂಕಿನ ಹಂದಿಹಾಳ, ಗೊಟಗೊಡಿ ಗ್ರಾಮಗಳ ಮೂಲಕ ಹಾಯ್ದು ಹೋಗಿದೆ. ಈ ಪೈಕಿ ಒಂದು ಗ್ರಾಮದಲ್ಲಿ ರೈಲು ನಿಲ್ದಾಣವನ್ನು ಆರಂಭಿಸುವುದರಿಂದ ತಾಲೂಕಿನ ಜನತೆಗೆ ಅನುಕೂಲವಾಗಲಿದ್ದು, ಈ ಭಾಗದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಶ್ರೀನಿವಾಸ ಮಾನೆ ಮನವಿ ಮಾಡಿದರು.

ತಾಲೂಕಿನ ಜನಸಂಖ್ಯೆ 3 ಲಕ್ಷದಷ್ಟಿದೆ. ಕಾರ್ವಿುಕ ವರ್ಗ ದುಡಿಯಲು ಬೇರೆ ಬೇರೆ ಜಿಲ್ಲೆಗಳಿಗೆ ತೆರಳುತ್ತಾರೆ. ತಾಲೂಕಿನಲ್ಲಿ ಮಾವು, ಅಡಕೆ, ಶುಂಠಿ, ಗೋವಿನಜೋಳ ಇನ್ನಿತರ ವಾಣಿಜ್ಯ ಬೆಳೆಗಳನ್ನು ಹೇರಳವಾಗಿ ಬೆಳೆಯಲಾಗುತ್ತಿದೆ. ಹೊಸದಾಗಿ ರೈಲು ನಿಲ್ದಾಣ ಮಾಡುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ವ್ಯಾಪಾರ, ವಹಿವಾಟು ಬೆಳೆಯಲಿದೆ. ದುಡಿಯುವ ಕೈಗಳಿಗೆ ಉದ್ಯೋಗ ಸಿಗಲಿದೆ. ತಾಲೂಕಿನಲ್ಲಿ ರೈಲು ನಿಲ್ದಾಣ ಆಗಬೇಕು ಎನ್ನುವುದು ಬಹಳ ದಶಕಗಳ ಕನಸು. ಅದೀಗ ಕೂಡಿ ಬಂದಿದೆ. ತಾಳಗುಪ್ಪಹುಬ್ಬಳ್ಳಿ ಹೊಸ ರೈಲು ಮಾರ್ಗ ಹಾನಗಲ್ಲ ತಾಲೂಕಿನಲ್ಲಿಯೇ ಹಾಯ್ದು ಹೋಗುವುದರಿಂದ ರೈಲು ನಿಲ್ದಾಣ ಸ್ಥಾಪಿಸಲು ಸಾಧ್ಯವಿದೆ. ರಾಜ್ಯ ಸಚಿವರು ವಿಶೇಷ ಮುತುವರ್ಜಿ ವಹಿಸುವಂತೆ ಶ್ರೀನಿವಾಸ ಮಾನೆ ಮನವಿ ಮಾಡಿದರು. ಮಾನೆ ಅವರ ಮನವಿಗೆ ವಿ. ಸೋಮಣ್ಣ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಹಾನಗಲ್ಲ ತಾಲೂಕಿನಲ್ಲಿ ರೈಲು ನಿಲ್ದಾಣ ಸ್ಥಾಪಿಸುವ ಕುರಿತು ಮೌಖಿಕ ಭರವಸೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಗದಗ-ಯಲವಿಗಿ ರೈಲು ಮಾರ್ಗ ಕಾಮಗಾರಿ ಶೀಘ್ರ ಕೈಗೊಳ್ಳಬೇಕು. ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net