

ನರಗುಂದ: ನವಿಲುತೀರ್ಥ ಜಲಾಶಯದಿಂದ ರೈತರ ಬೆಳೆಗಳಿಗೆ ನೀರೊದಗಿಸುವಂತೆ ಆಗ್ರಹಿಸಿ ರೈತಸೇನಾ ಕರ್ನಾಟಕ ಸಂಘಟನೆ ಸದಸ್ಯರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
ರೈತ ಮುಖಂಡ ಎಸ್.ಕೆ. ಗಿರಿಯಣ್ಣವರ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ತಾಲೂಕಿನಾದ್ಯಂತ ಸರಿಯಾಗಿ ಮಳೆ ಸುರಿದಿಲ್ಲ. ಮುಂಗಾರು ಪೂರ್ವ ಸುರಿದಿದ್ದ ಮಳೆಗೆ ಸಾಕಷ್ಟು ಜನ ರೈತರು ಹೆಸರು ಬಿತ್ತನೆ ಮಾಡಿದ್ದರು. ಆದರೆ, ತೇವಾಂಶ ಕೊರತೆಯಿಂದ ಪ್ರತಿಯೊಬ್ಬರ ಬೆಳೆಗಳು ಸಂಪೂರ್ಣ ಹಾಳಾಗಿವೆ. ಬಹುತೇಕ ರೈತರು ಬಿತ್ತನೆ ಮಾಡಿದ ಬೆಳೆಗಳನ್ನು ತಮ್ಮ ಕೈಯ್ಯರೆ ಹರಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಹತ್ತಿ, ಈರುಳ್ಳಿ, ಗೋವಿನಜೋಳ ಮತ್ತಿತರ ಬೆಳೆಗಳನ್ನು ಬೆಳೆದಿದ್ದಾರೆ. ಅವುಗಳು ನೀರಿಲ್ಲದೆ ಕಮರುತ್ತಿವೆ. ನವಿಲುತೀರ್ಥ ಜಲಾಶಯದಿಂದ ಕಾಲುವೆಗಳ ಮುಖಾಂತರ ತಕ್ಷಣವೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಎಸ್.ಬಿ. ಜೋಗಣ್ಣವರ ಮಾತನಾಡಿದರು. ಅರ್ಜುನ ಮಾನೆ, ವಾಸು ಚವ್ಹಾಣ, ಹನುಮಂತ ಸರನಾಯ್ಕರ, ಸಿದ್ದಪ್ಪ ಸನ್ನಿ, ಪರಶುರಾಮ ಜಂಬಗಿ, ಫಕೀರಪ್ಪ ಅಣ್ಣಿಗೇರಿ, ಚನ್ನಬಸಪ್ಪ ಕತ್ತಿ, ಗುರುಶಿದ್ದಪ್ಪ ಮರಬಸಣ್ಣವರ, ಮಾರುತಿ ಯಾದವ, ಚನ್ನಬಸನಗೌಡ ಪಾಟೀಲ, ಎಂ.ಎ. ನಾಯ್ಕರ, ಮಾರುತಿ ಕೋಟಳ್ಳಿ, ವಾಸು ಭೂಸಾರೆ, ಮುತ್ತಪ್ಪ ಶೆಳಕೆ, ವಿಠ್ಠಲ ತೋಂಡ್ಲೆ, ನಾಗಪ್ಪ ಶಿತೋಳೆ, ಸಿ.ಎಸ್.ಪಾಟೀಲ, ಇತರರಿದ್ದರು.