

ಸುಳ್ಯ: ನಗರದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಈದ್ ಮಿಲಾದ್ ಆಚರಿಸಲಾಯಿತು.
ಮಕ್ಕಳು ಈದ್ ಮಿಲಾದ್ ಸಂಕೇತವಾಗಿರುವ ದಫ್ ನೃತ್ಯ, ಹುಡುಗರು ಕವಾಲಿ ಮತ್ತು ಪುಟಾಣಿ ಮಕ್ಕಳು ಈದ್ ಮಿಲಾದ್ ಹಾಡನ್ನು ಹಾಡುವ ಮೂಲಕ ಆಚರಣೆಗೆ ಮೆರು ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅಬ್ದುಲ್ ಸಮಾದ್ ಮಾತನಾಡಿ, ಎಲ್ಲ ಧರ್ಮ ಶಾಂತಿ ಮತ್ತು ಮಾನವೀಯತೆಯನ್ನು ಕಲಿಸುತ್ತದೆ. ಯಾರು ತಮ್ಮ ಧರ್ಮವನ್ನು ಗೌರವಿಸುತ್ತಾರೋ ಅವರು ಇತರ ಧರ್ಮವನ್ನು ಗೌರವಿಸುತ್ತಾರೆ ಎಂದು ಈದ್ ಮಿಲಾದ್ ಸಂದೇಶ ನೀಡಿದರು.
ಶಾಲಾ ಸಂಚಾಲಕ ಫಾದರ್ ವಿಕ್ಟರ್ ಡಿಸೋಜಾ ಅಧ್ಯಕ್ಷತೆ ವಹಿಸಿ, ಎಲ್ಲ ಧರ್ಮಗಳು ಹೂತೋಟದಲ್ಲಿನ ಹೂವಿನಂತೆ. ನಮ್ಮ ಧರ್ಮದ ಜೊತೆ ಇತರ ಧರ್ಮಗಳನ್ನು ಗೌರವಿಸುವ ಗುಣ ಬೆಳೆಸಿಕೊಳ್ಳೋಣ ಎಂದರು.
ಮುಖ್ಯಶಿಕ್ಷಕಿ ಮೇರಿ ಸ್ಟೆಲ್ಲಾ, ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳಾದ ಪ್ರಮೋದ್ ಶೆಟ್ಟಿ, ಶಶಿಧರ್ ಎಚ್.ಮತ್ತು ಹೇಮನಾಥ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹೈನಾ ತಸ್ಲಿಮ್ ಸ್ವಾಗತಿಸಿ, ಹೈಫಾ ವಂದಿಸಿದರು. ರಿಫಾ ನಿರೂಪಿಸಿದರು.