ಸಹೋದರತ್ವ ಕಲ್ಪನೆಗೂ ಮೀರಿದ ಸಂಬಂಧ

22bhr 2 (1)
Published on

ಬಾಳೆಹೊನ್ನೂರು: ಅಣ್ಣ, ತಂಗಿಯರು ರಕ್ಷಾಬಂಧನದ ಮೂಲಕ ಗಟ್ಟಿಗೊಳಿಸುವ ಸಹೋದರತ್ವದ ಸಂಬಂಧ ಕಲ್ಪನೆಗೂ ಮೀರಿದೆ ಎಂದು ಜಯಪುರ ಬಿಜಿಎಸ್ ಕಾಲೇಜಿನ ಉಪನ್ಯಾಸಕ ಸೋಮೇಶ್‌ಗೌಡ ಹೇಳಿದರು.
ಪಟ್ಟಣದ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ಬುಧವಾರ ಆಯೋಜಿಸಿದ್ದ ರಕ್ಷಾಬಂಧನ ಹಾಗೂ ಸ್ನೇಹಿತರ ದಿನದ ಸನ್ಮಿತ್ರ ಸೋದರ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಣ್ಣ, ತಂಗಿ ಎಂಬುದು ಭಾವನಾತ್ಮಕವಾಗಿ ಬಂದಿರುವ ಅನ್ಯೋನ್ಯತೆಯ ಸಂಬಂಧ. ಅಣ್ಣನ ಸಂಕಷ್ಟದಲ್ಲಿ ತಂಗಿ, ತಂಗಿಗೆ ತೊಂದರೆಯಾದಾಗ ಅಣ್ಣ ಜತೆಗೆ ನಿಲ್ಲುವುದೇ ಈ ಸಂಬಂಧದ ವಿಶೇಷ. ಈ ಸಂಬಂಧಕ್ಕೆ ಬೆಲೆ ಕಟ್ಟಲಾಗದ ಮೌಲ್ಯವಿದ್ದು, ಪೌರಾಣಿಕ ಕಾಲದಿಂದಲೂ ಅಣ್ಣ, ತಂಗಿಗೆ ವಿಶೇಷ ಮಹತ್ವವಿದೆ ಎಂದರು.
ಪ್ರತೀ ವರ್ಷ ಶ್ರಾವಣ ಮಾಸದ ಪೌರ್ಣಿಮೆ ದಿನ ರಕ್ಷಾ ಬಂಧನದ ಆಚರಣೆ ಮಾಡಲಾಗುತ್ತಿದೆ. ಈ ದಿನ ಯಾವುದೇ ಊರಿನಲ್ಲಿದ್ದರೂ ಸಹೋದರಿ ತನ್ನ ಊರಿಗೆ ಬಂದು ಸಹೋದರನಿಗೆ ಬಾಂಧವ್ಯದ ರಕ್ಷೆ ಕಟ್ಟಿದರೆ ಅದರಲ್ಲಿ ದೊರೆಯುವ ಆನಂದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಮೇಲ್ಪಾಲ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ವಿಶ್ವನಾಥ್ ವಿವಿಧ ವಿಶೇಷತೆಯ ಕೌತುಕಗಳ ಪ್ರದರ್ಶನ ನೀಡಿದರು. ಗಾಯಕ ರಾಜೇಶ್ ಅವರಿಂದ ಗೀತಗಾಯನ ನಡೆಯಿತು. ಸೀನಿಯರ್ ಚೇಂಬರ್ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಎ.ಆರ್.ಸುರೇಂದ್ರ, ಕಾರ್ಯದರ್ಶಿ ಕೆ.ಎಂ.ರಾಘವೇಂದ್ರ, ಖಜಾಂಚಿ ಎಚ್.ಗೋಪಾಲ್, ಕಾರ್ಯಕ್ರಮ ಸಂಯೋಜಕ ಚೈತನ್ಯ ವೆಂಕಿ, ಅರ್ಪಿತಾ, ದೀಪಾ, ಪ್ರತಿಮಾ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net