

ಮಂಡ್ಯ: ಶಾಸನಗಳು ಜಿಲ್ಲೆಯ ಪೂರ್ವದ ಇತಿಹಾಸ ತಿಳಿಸುತ್ತದೆ. ಈ ಹಿನ್ನೆಲೆಯಲ್ಲಿ ಶಾಸನ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಆತಗೂರು ಕಾಳಿ ಹೆಸರಿನ ನಾಯಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪನಾ ಸಮಾರಂಭ ಹಾಗೂ ಕೆರೆ-ಕಟ್ಟೆಗಳ ಅಳಿವು ಉಳಿವು ಕುರಿತು ಅಧಿಕಾರಿಗಳೊಂದಿಗೆ ಒಂದು ಚಿಂತಾವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚದಲ್ಲೇ ಯಾವ ದೇಶದಲ್ಲೂ ಇರದ ಐತಿಹಾಸಿಕ ಪರಂಪರೆಯನ್ನು ಭಾರತ ಹೊಂದಿದೆ ಎಂದರು.
ಆತಗೂರು ಕಾಳಿ ಹೆಸರಿನ ನಾಯಿ ಶಾಸನ ತನ್ನದೇ ಆದ ವಿಶೇಷ ಮಹತ್ವ ಹೊಂದಿದೆ. ಅದನ್ನು ಸಂರಕ್ಷಿಸಲು ಜಿಲ್ಲಾಡಳಿತ ನಡೆಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಕೆರೆ-ಕಟ್ಟೆಗಳ ಸಂರಕ್ಷಣೆ ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಂತ ಅಗತ್ಯದ ಕೆಲಸ. ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಇರಬೇಕು. ಆಗ ಮಾತ್ರ ಕೆರೆಗಳ ಸಂರಕ್ಷಣೆಯಲ್ಲಿ ಸುಧಾರಣೆ ಕಾಣಬಹುದಾಗಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಸಹ ಕೆರೆ ಸಂರಕ್ಷಣೆಗೆ ಸಹ ಹಲವಾರು ಯೋಜನೆ ಹಾಗೂ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪ್ರಾಣಿಗಳನ್ನು ಗೌರವದಿಂದ ಕಾಣಬೇಕು ಎನ್ನುವುದಕ್ಕೆ ಈ ಒಂದು ಶಾಸನ ನಿಜಕ್ಕೂ ಸಾಕ್ಷಿಯಾಗಿದೆ. ಶಾಸನಗಳನ್ನು ಒಂದು ಕಲ್ಲು ಎಂದು ಪರಿಗಣಿಸದೆ, ಅದರಲ್ಲಿ ಇರುವ ಒಳ ಅರ್ಥವನ್ನು ಅರಿತಾಗ ಅದರ ಮಹತ್ವವೇನು ಎಂದು ತಿಳಿಯುತ್ತದೆ. ನಮ್ಮ ಪರಂಪರೆ, ಇತಿಹಾಸಗಳಿಗೆ ಸಾಕ್ಷಿಯಾಗಿರುವ ಶಾಸನಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಮಂಡ್ಯ ಕಲೆ, ಸಂಸ್ಕೃತಿ ಇತಿಹಾಸದಲ್ಲಿ ಶ್ರೀಮಂತಿಕೆ ಹೊಂದಿರುವ ಜಿಲ್ಲೆ. ಅಂತೆಯೇ 1000ಕ್ಕೂ ಹೆಚ್ಚು ಶಾಸನಗಳು ಲಭ್ಯವಿದ್ದು, ಎಲ್ಲವೂ ಸಹ ನಮ್ಮ ಸಂಸ್ಕೃತಿ ಇತಿಹಾಸದ ಮಹತ್ವವನ್ನ ತಿಳಿಸಿ ಹೇಳುವ ಶಾಸನಗಳಾಗಿವೆ. ನಾವು ಮುಂದಿನ ಪೀಳಿಗೆಗೆ ಶಾಸನಗಳನ್ನು ಉಳಿಸಿಕೊಡಲು ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಪೂರ್ವಜರ ಕಾಲದಿಂದಲೂ ಬಳುವಳಿಯಾಗಿ ಬಂದಿರುವ ಕೆರೆಗಳನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಗ್ರಾಮ ಹಾಗೂ ಕೆರೆಗಳಿಗೆ ಅವಿಭಾಜ್ಯ ಸಂಬಂಧವಿದೆ. ಕೆರೆಗಳನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ. ಅದರ ಉಳಿವಿಗೆ ನಾವು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಸುಮಾರು 967 ಕೆರೆಗಳಿವೆ. ಅವುಗಳನ್ನು ಗುರುತಿಸಿ ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ಪ್ರತಿ ತಿಂಗಳಿಗೊಮ್ಮೆ ಸಭೆ ಆಯೋಜಿಸಿ ಸಂರಕ್ಷಣೆಯ ಬಗ್ಗೆ ಎಲ್ಲ ಅಧಿಕಾರಿಗಳು ಸೂಚನೆ ನೀಡುತ್ತಿದ್ದೇನೆ. ಕೆರೆಗಳಲ್ಲಿ ಅವೈಜ್ಞಾನಿಕವಾಗಿ ಹೂಳು ತೆಗೆಯುವುದರಿಂದಲೂ ಕೆರೆಗಳಿಗೆ ಹಾನಿವುಂಟಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಕೆರೆಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರವು ಬಹಳ ಮುಖ್ಯ. ಸಾರ್ವಜನಿಕರಿಗೆ ಕೆರೆ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಮಾತನಾಡಿ, ಇತಿಹಾಸದ ವೈಭವವನ್ನು ಸಾರುವ ಅನೇಕ ದೇವಾಲಯ, ಸ್ಮಾರಕ, ಶಾಸನಗಳನ್ನು ಸಂರಕ್ಷಣೆ ಮಾಡಬೇಕಾಗಿದೆ. ಆತಗೂರು ನಾಯಿ ಶಾಸನವನ್ನು ಅಮೆರಿಕಾದ ಒಂದು ವಿಶ್ವವಿದ್ಯಾನಿಲಯದ ವಸ್ತುಸಂಗ್ರಹಾಲಯದಲ್ಲಿ ನೂರು ವರ್ಷ ಹಿಂದೆಯೇ ಅದರ ಪ್ರತಿಕೃತಿಯನ್ನು ಸ್ಥಾಪಿಸಲಾಗಿದೆ ಎಂದರೆ ಇದರ ಮಹತ್ವ ಅರಿತುಕೊಳ್ಳಿ. ಕೆರೆಗಳನ್ನು ಸಂರಕ್ಷಿಸಿಕೊಳ್ಳದೆ ಹೋದರೆ ಮುಂದಿನ ಪೀಳಿಗೆಗೆ ಇದರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಕೆರೆ-ಕಟ್ಟೆಗಳನ್ನು ಕನ್ನಡಿಯಂತೆ ಸೂಕ್ಷ್ಮವಾಗಿ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಶಾಸನಗಳ ಮೌಲ್ಯದ ಬಗ್ಗೆ ಅನೇಕರಿಗೆ ಅರಿವಿಲ್ಲ. ಶಾಸನಗಳ ಮೌಲ್ಯದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಬೇಕಿದೆ. ಶಾಸನಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅವುಗಳನ್ನು ಸಂರಕ್ಷಿಸಬೇಕಾಗಿದೆ. ಸಾರ್ವಜನಿಕರು ನಮ್ಮ ನೆಲದ ಶಾಸನಗಳನ್ನು ಹೆಮ್ಮೆಯಿಂದ ಕಾಳಜಿಯಿಂದ ಕಾಣುವಂತಾಗಬೇಕು ಎಂದು ಕರೆ ನೀಡಿದರು.
ನಿವೃತ್ತ ಐಎಎಸ್ ಅಧಿಕಾರಿ ಡಾ.ಕೆ.ಎಚ್.ಗೋಪಾಲಕೃಷ್ಣೇಗೌಡ ಮಾತನಾಡಿ, ನಗರೀಕರಣದಿಂದ ಕೆರೆ-ಕಟ್ಟೆಗಳನ್ನು ಮುಚ್ಚಿ ಕಟ್ಟಡ ನಿರ್ಮಿಸಿಕೊಳ್ಳುತ್ತಿದ್ದಾರೆ. ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿಗೆ ಅಧಿಕಾರಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕಾಗಿದೆ. ಜನಜೀವನಕ್ಕೆ ಕೆರೆಗಳು ಎಷ್ಟು ಮುಖ್ಯ ಎಂಬುದು ಸಾರ್ವಜನಿಕರ ಅರ್ಥೈಸಿಕೊಳ್ಳಬೇಕು. ಆತಗೂರು ಶಾಸನದ ಬಗ್ಗೆ ಜಿಲ್ಲೆಯ ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಇತಿಹಾಸ ಸಂಶೋಧಕ ಮೊಹಮ್ಮದ್ ಕಲೀಂ, ಸಿ.ಮಹದೇವ್, ಹರವು ದೇವೇಗೌಡ, ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಇತರರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆತಗೂರು ಕಾಳಿ ಹೆಸರಿನ ನಾಯಿ ಶಾಸನದ ಪ್ರತಿಕೃತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅನಾವರಣಗೊಳಿಸಿದರು.