

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ರೆಡ್ಡಿ ಸಮುದಾಯದ ಯಾರೊಬ್ಬರಿಗೂ ಮಂತ್ರಿ ಸ್ಥಾನ ಕೊಟ್ಟಿಲ್ಲ. ನಮ್ಮ ಸಮುದಾಯದ ನಾಯಕರನ್ನು ಕಡೆಗಣಿಸಲಾಗಿದೆ. ರೆಡ್ಡಿ ಸಮುದಾಯದ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರೆಡ್ಡಿ ಜನಸಂಘವು ಕೋರಮಂಗಲದ ವೇಮನ ತಾಂತ್ರಿಕ ವಿವಿ ಆವರಣದಲ್ಲಿ ಶನಿವಾರ ಪ್ರತಿಭಟನೆ ಹಮ್ಮಿಕೊಂಡಿತ್ತು.
ಪ್ರತಿಭಟನೆಯಲ್ಲಿ ಮಾತನಾಡಿದ ಎರೆಹೊಸಹಳ್ಳಿ ವೇಮನಾನಂದ ಸ್ವಾಮೀಜಿ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕೆಲವೊಂದು ಸಮುದಾಯ ನಾಯಕರಿಗೆ ಮಾತ್ರ ಸಚಿವ ಸ್ಥಾನ ನೀಡಿದ್ದು, ರೆಡ್ಡಿ ಸಮುದಾಯವನ್ನು ಕಡೆಗಣಿಸಿದೆ ಎಂದು ಅಸಮಾಧಾನ ಹೊರಹಾಕಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ನಿರ್ದಿಷ್ಟ ಸಮುದಾಯದ ಓಲೈಕೆಗೆ ನಿಂತು, ಉಳಿದ ಸಮುದಾಯಗಳನ್ನು ಕಡೆಗಣಿಸಿದೆ. ಇದೇ ಪ್ರಕ್ರಿಯೆ ಮುಂದುವರಿದರೆ ಉಳಿದ ಸಮುದಾಯಗಳೆಲ್ಲ ಒಗ್ಗಟ್ಟಾಗಿ ಸರ್ಕಾರದ ಅಳಿವಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಂ.ಸತೀಶ್ ರೆಡ್ಡಿ ಅವರು ರೆಡ್ಡಿ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಸಚಿವರ ಪ್ರಮಾಣ ವಚನದ ಹಿಂದಿನ ದಿನ ಸತೀಶ್ ರೆಡ್ಡಿಗೆ ಸಚಿವ ಸ್ಥಾನ ಲಭಿಸಿದೆ ಎನ್ನಲಾಗಿತ್ತು. ಮುಖ್ಯಮಂತ್ರಿಗಳು ದಿಢೀರನೇ ಬದಲಾವಣೆ ಮಾಡುವ ಮೂಲಕ ರೆಡ್ಡಿ ಸಮುದಾಯವನ್ನು ಕಡೆಗಣಿಸಿದ್ದಾರೆ. ಕೂಡಲೇ ಬೆಂಗಳೂರು ನಗರ ಭಾಗದಲ್ಲಿ ರೆಡ್ಡಿ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡುವಂತೆ ವೇಮನಾನಂದ ಸ್ವಾಮೀಜಿ ಆಗ್ರಹಿಸಿದರು.
ಕರ್ನಾಟಕ ರೆಡ್ಡಿ ಜನಸಂಘ ಅಧ್ಯಕ್ಷ ಜಯರಾಂರೆಡ್ಡಿಯವರು ಮಾತನಾಡಿ, ಬೆಂಗಳೂರು ಅಭಿವೃದ್ಧಿಗೆ ರೆಡ್ಡಿ ಜನಾಂಗದ ಕೊಡುಗೆ ಅಪಾರವಾಗಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಭಾರಿಗೆ ಬಿಜೆಪಿ ಸರ್ಕಾರ ರಚನೆಗೆ ರೆಡ್ಡಿ ಸಮುದಾಯ ಪ್ರಮುಖ ಪಾತ್ರ ವಹಿಸಿದೆ. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ರೆಡ್ಡಿ ಸಮುದಾಯದವರನ್ನು ಗೆಲ್ಲಿಸುವಲ್ಲಿ ಸಮುದಾಯದವರು ಶ್ರಮಿಸಿದೆ. ಆದರೆ, ಬೆಂಗಳೂರು ನಗರದಲ್ಲಿ ಪ್ರಬಲ ರೆಡ್ಡಿ ಜನನಾಯಕ ಸತೀಶ್ ರೆಡ್ಡಿಯವರಿಗೆ ಸಚಿವ ಸ್ಥಾನ ನೀಡದೇ ಬಿಜೆಪಿ ಸರ್ಕಾರ ನಿರ್ಲಕ್ಷತೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಎಂ. ಸತೀಶ್ ರೆಡ್ಡಿಯವರಿಗೆ ಸಚಿವ ಸ್ಥಾನ ನೀಡದಿದ್ದರೆ ಮುಂಬರುವ ದಿನಗಳಲ್ಲಿ ನಾವು ರಾಜ್ಯದಾದ್ಯಂತ ಪ್ರತಿಭಟನೆಗೆ ಮುಂದಾಗುತ್ತೇವೆ. ನಿರ್ದಿಷ್ಟ ಸಮುದಾಯದವರ ಓಲೈಕೆಗೆ ಸರ್ಕಾರ ಬದ್ಧವಾಗಿದ್ದರೇ, ನಾವು ನಮ್ಮ ಸಮುದಾಯದವರ ಒಗ್ಗಟ್ಟುತನ ಪ್ರದರ್ಶಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮಾಜಿ ಮೇಯರ್ ಎಸ್.ಕೆ. ನಟರಾಜ್, ಕರ್ನಾಟಕ ರೆಡ್ಡಿ ಜನಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎನ್. ಕೃಷ್ಣಾರೆಡ್ಡಿ, ನಿರ್ದೇಶಕ ಶೇಖರ್ ರೆಡ್ಡಿ ಸೇರಿ ಹಲವು ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.