ನೀರಿನ ಸಂಪ್‌ನಲ್ಲಿ 2.68 ಕೋಟಿ ಮೌಲ್ಯದ ರಕ್ತ ಚಂದನ ಅಡಗಿಸಿಟ್ಟಿದ್ದ ಖದೀಮರು! ಬೆಂಗ್ಳೂರಲ್ಲಿ ಐವರ ಬಂಧನ

red Sandal
Published on

ಬೆಂಗಳೂರು: ನೀರಿನ ಸಂಪ್​ನಲ್ಲಿ ಅಕ್ರಮವಾಗಿ 2.68 ಕೋಟಿ ರೂಪಾಯಿ ಮೌಲ್ಯದ ರಕ್ತ ಚಂದನ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 1,693 ಕೆಜಿ ರಕ್ತ ಚಂದನ ಜಪ್ತಿ ಮಾಡಿದ್ದಾರೆ.

ಕಾಮಾಕ್ಷಿಪಾಳ್ಯದ ವೃಷಭಾವತಿ ನಗರದ ವಿನೋದ(31), ಮಾಗಡಿಯ ವೀರಪುರದ ಲಕ್ಷ್ಮಯ್ಯ(45), ಮಾಗಡಿಯ ಸುಬ್ಬಣ್ಣನಪಾಳ್ಯದ ಸಂಜಯ್(19), ಹಾಸನದ ಪೆದ್ದನಹಳ್ಳಿಯ ಪಿ.ಡಿ.ರಾಜು(36) ಮತ್ತು ತುಮಕೂರಿನ ಶೆಟ್ಟಿಗೆಹಳ್ಳಿಯ ಕೃಷ್ಣ(38) ಬಂಧಿತರು. ಇನ್ನೂ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರಿನಿಂದ ರಕ್ತ ಚಂದನ ತಂದು ಹೆಸರುಘಟ್ಟದ ಮನೆಯಲ್ಲಿ ಸಂಗ್ರಹಿಸಿದ್ದರು. ಜು.22ರಂದು ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಸಮೀಪದ ಟಿಂಬರ್ ಲೇಔಟ್‌ನಲ್ಲಿ ರಕ್ತ ಚಂದನ ತುಂಡುಗಳ ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು.

ಇನ್‌ಸ್ಪೆಕ್ಟರ್ ಜಿ.ಕೆ. ಶಂಕರನಾಯಕ್ ನೇತೃತ್ವದ ತಂಡ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ವಿನೋದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಈತ ಕೊಟ್ಟ ಮಾಹಿತಿ ಮೇರೆಗೆ ಹೆಸರುಘಟ್ಟ ಮನೆಯ ಮೇಲೆ ದಾಳಿ ನಡೆಸಿದಾಗ ಸಂಪ್‌ನಲ್ಲಿ ನೀರು ಖಾಲಿ ಮಾಡಿ ರಕ್ತ ಚಂದನ ಸಂಗ್ರಹಿಸಿರುವುದು ಗೊತ್ತಾಯಿತು. 1,580 ಕೆಜಿ ರಕ್ತ ಚಂದನ ಪತ್ತೆ ಆಯಿತು. ಇದಾದ ಮೇಲೆ ತನಿಖೆ ಮುಂದುವರಿಸಿದಾಗ ಮತ್ತೆ ನಾಲ್ವರು ಆರೋಪಿಗಳು ಸೆರೆಸಿಕ್ಕಿದ್ದಾರೆ. ಇವರಿಂದ 113 ಕೆಜಿ ರಕ್ತ ಚಂದನ ಪತ್ತೆ ಆಗಿದೆ. ಜತೆಗೆ ಎರಡು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧನಕ್ಕೆ ಒಳಗಾಗಿರುವ ಆರೋಪಿಗಳಿಗೆ ಮಾಸ್ಟರ್‌ಮೈಡ್‌ಗಳು ಬೇರೆಯೇ ಇದ್ದಾರೆ. ಚಿತ್ತೂರಿನಿಂದ ಬೆಂಗಳೂರಿಗೆ ಸಾಗಾಟ ಮಾಡಿದ ರಕ್ತ ಚಂದನವನ್ನು ಸಂಗ್ರಹಿಸಲು ಮತ್ತು ಸುರಕ್ಷಿತವಾಗಿ ನೋಡಿ ಕೊಳ್ಳುವ ಜವಾಬ್ದಾರಿ ಮಾತ್ರ ಇವರಿಗೆ ನೀಡಲಾಗಿತ್ತು. ತಲೆಮರೆಸಿಕೊಂಡಿರುವ ಆರೋಪಿಗಳು ಕಿಂಗ್‌ಪಿನ್‌ಗಳಾಗಿದ್ದು, ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net