

ಬೆಳಗಾವಿ: ಮಹಾಮಾರಿ ಕರೊನಾವನ್ನೇ ಬಂಡವಾಳ ಮಾಡಿಕೊಂಡ ಖತರ್ನಾಕ್ ಕಳ್ಳನೊಬ್ಬ, ಕೋಟ್ಯಂತರ ರೂ. ಮೌಲ್ಯದ ರಕ್ತಚಂದನ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ವಾಹನದ ಮೇಲೆ 'ಕೋವಿಡ್-19 ಸೇವೆಗಾಗಿ ಹಣ್ಣು ಮಾರಾಟ ವಾಹನ' ಎಂದು ಬೋರ್ಡ್ ಹಾಕಿಕೊಂಡು ಅದರಲ್ಲಿ ರಕ್ತಚಂದನ ತುಂಬಿಕೊಂಡು ಕರ್ನಾಟಕ-ಆಂಧ್ರ ಅಂತರರಾಜ್ಯ ಗಡಿ ದಾಟಿ ಮಹಾರಾಷ್ಟ್ರ ಗಡಿಗೆ ಬಂದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣ ಪುಷ್ಪ ಸಿನಿಮಾ ಸ್ಟೈಲ್ನಲ್ಲೇ ನಡೆದಿದೆ.
ಯಾಸೀನ್ ಇನಾಯತ್ ಉಲ್ಲಾ ಬಂಧಿತ ಆರೋಪಿ. ಈತ ಕರ್ನಾಟಕದ ಆನೇಕಲ್ ಮೂಲದವ. ಸುಮಾರು ಎರಡೂವರೆ ಕೋಟಿ ಮೌಲ್ಯದ ರಕ್ತಚಂದನ ಮತ್ತು ಕೃತ್ಯಕ್ಕೆ ಬಳಸಿದ ವಾಹನವೊಂದನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುಷ್ಟ ಸಿನಿಮಾದಲ್ಲಿ ಕಳ್ಳರು ರಕ್ತಚಂದನ ಸಾಗಿಸುವಾಗ ಪೊಲೀಸರಿಗೆ ಅನುಮಾನ ಬಾರದಿರಲೆಂದು ಹಾಲಿನ ವಾಹನ ಬಳಸಿಕೊಂಡ ದೃಶ್ಯವಿದೆ. ಇದನ್ನೇ ಹೋಲುವಂತೆ ಯಾಸೀನ್ ಇನಾಯತ್ ಉಲ್ಲಾ ವಾಹನಕ್ಕೆ 'ಕೋವಿಡ್-19 ಸೇವೆಗಾಗಿ ಹಣ್ಣು ಮಾರಾಟ ವಾಹನ' ಎಂಬ ಬೋರ್ಡ್ ಹಾಕಿಕೊಂಡು ರಕ್ತಚಂದನ ಸಾಗಿಸುತ್ತಿದ್ದ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅರಣ್ಯ ಅಧಿಕಾರಿಗಳು ಮತ್ತು ಪೊಲೀಸರು, ಮಹಾರಾಷ್ಟ್ರದ ಮೀರಜದಲ್ಲಿ ರಕ್ತಚಂದನ ವಶಪಡಿಸಿಕೊಂಡು ಆರೋಪಿಯನ್ನ ಬಂಧಿಸಿದ್ದಾರೆ.