

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿನ ಹುಂಡಿಗೆ ಸೆಪ್ಟೆಂಬರ್ ತಿಂಗಳಲ್ಲಿ ಭಕ್ತರಿಂದ ಸರ್ವಕಾಲಿಕ ದಾಖಲೆ ಪ್ರಮಾಣದ ಕಾಣಿಕೆ ಬಂದಿದ್ದು, ಸೋಮವಾರ ನಡೆದ ಹುಂಡಿಯಲ್ಲಿನ ಹಣದ ಎಣಿಕೆ ಕಾರ್ಯದಲ್ಲಿ 3.82 ಕೋಟಿ ರೂ. ಕಾಣಿಕೆ ಭಕ್ತರಿಂದ ಸಮರ್ಪಣೆಯಾಗಿದೆ.
ಇದುವರೆಗೂ ರಾಯರ ಹುಂಡಿಗೆ 2 ರಿಂದ 3 ಕೋಟಿ ರೂ.ವರೆಗೆ ಕಾಣಿಕೆ ಸಮರ್ಪಣೆಯಾಗುತ್ತಿತ್ತು. ಜುಲೈ ತಿಂಗಳಲ್ಲಿ 3.76 ಕೋಟಿ ರೂ. ಬಂದಿದ್ದು ಇದುವರೆಗಿನ ಅಕ ಮೊತ್ತವಾಗಿತ್ತು. ಆಗಷ್ಟ್‌ನಲ್ಲಿ 2.40 ಕೋಟಿ ರೂ. ಕಾಣಿಕೆಯಾಗಿ ಬಂದಿದ್ದು, ಸೆಪ್ಟೆಂಬರ್ ತಿಂಗಳಲ್ಲಿ 3.82 ಕೋಟಿ ರೂ. ಅತ್ಯಕ ಮೊತ್ತವಾಗಿದೆ.
ಆಗಸ್ಟ್ ತಿಂಗಳಲ್ಲಿ ಹುಂಡಿ ಎಣಿಕೆ ನಂತರದ 34 ದಿನಗಳಲ್ಲಿ ಹುಂಡಿಗೆ 3.74 ಕೋಟಿ ರೂ. ವಿವಿಧ ವೌಲ್ಯದ ನೋಟುಗಳು, 7.73 ಲಕ್ಷ ರೂ. ವೌಲ್ಯದ ನಾಣ್ಯಗಳು ಹಾಗೂ 53 ಗ್ರಾಂ ಬಂಗಾರ ಮತ್ತು 1,200 ಗ್ರಾಂ ಬೆಳ್ಳಿಯ ಸಾಮಗ್ರಿಗಳನ್ನು ಭಕ್ತರು ರಾಯರಿಗೆ ಕಾಣಿಕೆಯನ್ನಾಗಿ ನೀಡಿದ್ದಾರೆ.
ರಾಯರ ಆರಾಧನೆ ಮಹೋತ್ಸವ ನಿಮಿತ್ತ ಈ ತಿಂಗಳ ಆರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡಿರುವುದರಿಂದ ಹುಂಡಿಗೆ ಹೆಚ್ಚಿನ ಕಾಣಿಕೆ ಜಮಾವಣೆಯಾಗಿದ್ದು, ಬಂಗಾರ ಮತ್ತು ಬೆಳ್ಳಿ ಸಾಮಗ್ರಿಗಳು ಹಿಂದಿಗಿಂತ ಹೆಚ್ಚು ಭಕ್ತರು ನೀಡಿದ್ದಾರೆ.
ಶ್ರೀಮಠದ ಹುಂಡಿಗೆ ಪ್ರಸಕ್ತ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಕೆಯನ್ನು ಭಕ್ತರು ನೀಡಿದ್ದು, ಇದು ಸರ್ವಕಾಲಿಕ ದಾಖಲೆಯ ಮೊತ್ತವಾಗಿದೆ. ರಾಯರ ಆರಾಧನೆ ಮಹೋತ್ಸವ ಕಾರಣದಿಂದ ಕಾಣಿಕೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್ ತಿಳಿಸಿದ್ದಾರೆ.