

ಪರಶುರಾಮ ಭಾಸಗಿ ವಿಜಯಪುರ
ಸ್ವಾರ್ಥ, ಸ್ವಪ್ರತಿಷ್ಠೆ, ವೈಯಕ್ತಿಕ ಲಾಭ ಹಾಗೂ ರಾಜಕೀಯ ಹಿತಾಸಕ್ತಿಗಿಂತ ಹೆಚ್ಚಾಗಿ ಕ್ಷೇತ್ರದ ಅಭಿವೃದ್ಧಿ, ಜನರ ಹಿತರಕ್ಷಣೆಗಾಗಿ ತೊಡುವ ಸಂಕಲ್ಪ, ಹಿಡಿಯುವ ಛಲ, ಸಾಧಿಸುವ ಹಠ ನಿಜಕ್ಕೂ ಜನಮೆಚ್ಚುಗೆಗೆ ಪಾತ್ರವಾಗುತ್ತದೆ ಎಂಬುದಕ್ಕೆ ರಾಜ್ಯ ಬಜೆಟ್‌ನಲ್ಲಿ ಇಂಡಿಗೆ ಘೋಷಣೆಯಾದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ಗೆ ಸಿಗುತ್ತಿರುವ ಪ್ರಶಂಸೆಗಳ ಸುರಿಮಳೆಯೇ ಸಾಕ್ಷಿ.
ಉದ್ಯಮ ಕೇಂದ್ರಿತ ತಾಂತ್ರಿಕ ತರಬೇತಿ ಮೂಲಕ ಉದ್ಯೋಗಾರ್ಹತೆಯ ಕೌಶಲಗಳೊಂದಿಗೆ ಯುವಪಡೆಯನ್ನು ಸಜ್ಜುಗೊಳಿಸಿ ಕೈಗಾರಿಕೆಗಳಿಗೆ ಅತ್ಯಂತ ಕೌಶಲಪೂರ್ಣ ಕಾರ್ಯಪಡೆ ಪೂರೈಸುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಆರಂಭಿಸಿರುವ ಮಹತ್ವಾಕಾಂಕ್ಷಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ವನ್ನು ಇಂಡಿಯಲ್ಲಿಯೇ ಸ್ಥಾಪಿಸಬೇಕೆಂಬ ಶಾಸಕ ಯಶವಂತರಾಯಗೌಡ ಪಾಟೀಲರ ಜಿದ್ದು ಕೊನೆಗೂ ಗೆದ್ದಿದೆ.
ಪ್ರಸಕ್ತ ಬಜೆಟ್‌ನಲ್ಲಿ ಮಧುಗಿರಿ ಹಾಗೂ ಇಂಡಿಯಲ್ಲಿ ನಬಾರ್ಡ್ ಸಹಯೋಗದೊಂದಿಗೆ ಹಾಗೂ ಕಂಪ್ಲಿ, ರಾಯಚೂರು ಗ್ರಾಮೀಣ ಮತ್ತು ಸಿಂಧನೂರಿನಲ್ಲಿ ಕೆಕೆಆರ್‌ಡಿಬಿ ಮ್ಯಾಕ್ರೊ ಅನುದಾನದಡಿ ‘ಜಿಟಿಟಿಸಿ’ ಸ್ಥಾಪಿಸಲು ಕ್ರಮ ವಹಿಸುವುದಾಗಿ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಆ ಮೂಲಕ ಬಹುದಿನದ ಬೇಡಿಕೆಯೊಂದು ಈಡೇರಿದಂತಾಗಿದ್ದು, ಇದರಿಂದ ನಿರುದ್ಯೋಗಿಗಳಿಗೆ ಕೌಶಲ ತರಬೇತಿ ಕೊಡಿಸುವ ಮೂಲಕ ಉದ್ಯೋಗವಕಾಶ ಕಲ್ಪಿಸುವ ಶಾಸಕರ ಮತ್ತು ಜನರ ಕನಸು ಸಾಕಾರಗೊಂಡಂತಾಗಿದೆ.
ಕನಿಷ್ಠ ಎಸ್‌ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಪಡೆದ ನಿರುದ್ಯೋಗಿಗಳಿಗೆ ತಾಂತ್ರಿಕ ಕೌಶಲ ತರಬೇತಿ ನೀಡಿ ಕೈಗಾರಿಕೆಗಳಿಗೆ ಕುಶಲ ಕಾರ್ಮಿಕರನ್ನು ಪೂರೈಸುವ, ಸ್ವಯಂ ಉದ್ಯೋಗಿಗಳನ್ನಾಗಿಸುವ ಮಹತ್ವದ ತರಬೇತಿ ಕೇಂದ್ರ ಇದಾಗಿದೆ. ಈ ಕೇಂದ್ರದಲ್ಲಿ ಡಿಪ್ಲೊಮಾ ಮಾದರಿ ಸರ್ಟಿಫಿಕೇಟ್ ನೀಡಲಾಗುತ್ತದೆಯಲ್ಲದೇ ಸ್ವಯಂ ಉದ್ಯೋಗ ಕಂಡುಕೊಳ್ಳಲು ಇರುವ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಉದ್ಯಮ ಸ್ಥಾಪನೆ, ಸಾಲಸೌಲಭ್ಯಗಳ ವಿವರವೂ ಇರಲಿದೆ. ಇಲ್ಲಿ ಕಲಿತ ಶೇ. 99 ರಷ್ಟು ಯುವಕರು ಉದ್ಯೋಗವಕಾಶ ಕಂಡುಕೊಳ್ಳುತ್ತಾರೆ. ಕರ್ನಾಟಕ ಹಾಗೂ ಡೆನ್ಮಾರ್ಕ್ ಸರ್ಕಾರದ ಸಹಯೋಗದಲ್ಲಿ 1972ರಲ್ಲಿ ಬೆಂಗಳೂರಿನ ರಾಜಾಜಿನಗರದ ಕೈಗಾರಿಕೆ ವಲಯದಲ್ಲಿ ಪ್ರಪ್ರಥಮ ಬಾರಿಗೆ ಆರಂಭಗೊಂಡ ‘ಜಿಟಿಟಿಸಿ’ ಕೇಂದ್ರ ಬಳ್ಳಾರಿ ಮತ್ತು ವಿಜಯಪುರ ಬಿಟ್ಟರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇದೀಗ ಇಂಡಿಗೆ ಘೋಷಣೆಯಾಗುವ ಮೂಲಕ ಆ ಕೊರತೆಯೂ ನೀಗಿದೆ.
ಈ ಕೇಂದ್ರದ ಸ್ಥಾಪನೆಗಾಗಿ ಶಾಸಕ ಯಶವಂತರಾಯಗೌಡ ಪಾಟೀಲರು ಹಲವು ವರ್ಷಗಳಿಂದ ಪ್ರಯತ್ನ ನಡೆಸಿದ್ದರು. ಸದನದ
ಲ್ಲಿ ಧ್ವನಿ ಎತ್ತಿದ್ದರು. ಮಾತ್ರವಲ್ಲ, ಇದೇ ವಿಚಾರಕ್ಕೆ 2023 ಡಿಸೆಂಬರ್ ಅಂತ್ಯದಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಯಶವಂತರಾಯಗೌಡ ಪಾಟೀಲರ ಮಧ್ಯೆ ಜಟಾಪಟಿಯೂ ನಡೆದಿತ್ತು. ‘ಯಾವುದೋ ಮೂಲೆಯಲ್ಲಿ ಸ್ಥಾಪಿಸುವ ಬದಲು ಜಿಲ್ಲಾ ಕೇಂದ್ರದಲ್ಲಿಯೇ ಸ್ಥಾಪಿಸಿದರೆ ಎಂಟು ವಿಧಾನ ಸಭೆ ಕ್ಷೇತ್ರಗಳ ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲ’ ಎಂದು ಶಾಸಕ ಯತ್ನಾಳರು ಹೇಳಿದ್ದರು. ಆದರೆ, ಇಂಡಿಯೇನು ಹೊರರಾಜ್ಯದಲ್ಲಿದೆಯೇ? ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ತಿರಗೇಟು ನೀಡಿದ್ದರು.
‘ಈ ಹಿಂದೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅ
ವರನ್ನು ಒತ್ತಾಯಿಸಿದ್ದಾಗಿಯೂ, ಅದಕ್ಕಾಗಿ 5 ಎಕರೆ ಜಮೀನು ಮೀಸಲಿಟ್ಟಿದ್ದಾಗಿಯೂ ತಿಳಿಸಿದ್ದರು. ಅಲ್ಲದೇ, ಹಿಂದಿನ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ 5 ಕೋಟಿ ರೂಪಾಯಿ ಕೊಡುವುದಾಗಿ ಭರವಸೆ ನೀಡಿದ್ದರೆಂದು ಯತ್ನಾಳರು ಸದನದ ಗಮನ ಸೆಳೆದಿದ್ದರು. ಆಗ ಮಧ್ಯ ಪ್ರವೇಶಿಸಿದ್ದ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಶರಣಪ್ರಕಾಶ ಪಾಟೀಲ ‘ಸದ್ಯಕ್ಕೆ ಆ ಯೋಜನೆ ಇನ್ನೂ ಪರಿಶೀಲನೆಯಲ್ಲಿದ್ದು ತಾಂತ್ರಿಕ ಸಿಬ್ಬಂದಿಯಿಂದ ಪರಿಶೀಲನೆ ನಡೆಸಲಾಗುವುದು’ ಎಂದು ಸಮಜಾಯಿಷಿ ನೀಡಿ ಸಮಾಧಾನಪಡಿಸಿದ್ದರು. ಇದೀಗ
ಕೊನೆಗೂ ಇಂಡಿಗೆ ಆ ಕೇಂದ್ರ ಒಲಿದು ಬಂದಿದ್ದು, ಯಶವಂತರಾಯಗೌಡರ ಜಿದ್ದು ಗೆದ್ದಂತಾಗಿದೆ.
ಜಿಟಿಟಿಸಿ ಕೇಂದ್ರ ಸ್ಥಾಪಿಸಲು ಇಂಡಿ ಪಟ್ಟಣದ ವಸಂತ ನಗರದ ರಿಸನಂ-738ರಲ್ಲಿ 19 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದ್ದು, 2023 ಜು.3ರಂದೇ ಶಿಫಾರಸ್ಸು ಪತ್ರ ಕಳುಹಿಸಲಾಗಿದೆ. ಮಾರ್ಗಸೂಚಿ ಪ್ರಕಾರ ಏನೆಲ್ಲ ಮೂಲ ಸೌಕರ್ಯಗಳಿರಬೇಕೋ ಅದೆಲ್ಲವೂ ಇಂಡಿಯಲ್ಲಿದೆ. ಕನಿಷ್ಠ 30 ಪ್ರೌಢ ಶಾಲೆಗಳಿರಬೇಕೆಂಬ ನಿಯಮ ಇದ್ದು ಸದ್ಯ 39ಪ್ರೌಢ ಶಾಲೆಗಳಿವೆ. ಕನಿಷ್ಠ 10 ಐಟಿಐ ತರಬೇತಿ ಕೇಂದ್ರಗಳಿರಬೇಕಿದ್ದು 12 ಐಟಿಐ ತರಬೇತಿ ಕೇಂದ್ರಗಳಿವೆ. ಕನಿಷ್ಠ ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ಕಾಲೇಜ್ ಇರಬೇಕೆಂದಿದ್ದು ಆ ಕಾಲೇಜ್ ಸಹ ಇದೆ. 30 ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿರಬೇಕೆಂದಿದ್ದು, ಸಕ್ಕರೆ ಮತ್ತು ಸಿಮೆಂಟ್ ಸೇರಿದಂತೆ ಹಲವು ಕೈಗಾರಿಕೆಗಳೂ ಇವೆ. ತ್ವರಿತವಾಗಿ ಜಿಟಿಟಿಸಿ ಸ್ಥಾಪಿಸಲು ಏನೆಲ್ಲಾ ಮೂಲ ಸೌಕರ್ಯಗಳು ಬೇಕೋ ಅದೆಲ್ಲವೂ ಇದ್ದು, ತ್ವರಿತವಾಗಿ ಅನುಷ್ಠಾನಕ್ಕೆ ಬರಲಿ, ನಿರುದ್ಯೋಗ ನಿವಾರಣೆಯಾಗಲಿ, ಇಂಡಿ ಭಾಗಕ್ಕೆ ‘ಜಿಟಿಟಿಸಿ’ ವರವಾಗಲಿ ಎಂಬುದೇ ಸಾರ್ವಜನಿಕರ ಆಶಯ.