ಅನ್ನದಾತರ ಪಾಲಿನ ಆಶಾಕಿರಣ

20ark1
ಅರಕಲಗೂಡಿನಲ್ಲಿ ಬುಧವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕೆ.ಸಿ.ಸೌಮ್ಯಾ, ಸಿ.ಸ್ವಾಮಿ, ಪ್ರದೀಪ್ ಕುಮಾರ್ ಇತರರಿದ್ದರು.
Published on

ಅರಕಲಗೂಡು: ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ ರೈತರು ಬದುಕು ಕಟ್ಟಿಕೊಳ್ಳಲು ಶ್ರಮಿಸಿದ ಅರಸು ಅನ್ನದಾತರ ಪಾಲಿನ ಆಶಾಕಿರಣ ಎಂದು ತಹಸೀಲ್ದಾರ್ ಕೆ.ಸಿ.ಸೌಮ್ಯಾ ಹೇಳಿದರು.

ಪಟ್ಟಣದ ದೇವರಾಜ ಅರಸು ಭವನದಲ್ಲಿ ತಾಲೂಕು ಆಡಳಿತದ ವತಿಯಿದ ಬುಧವಾರ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜಮುಖಿ ನಾಯಕರಾಗಿ, ಶೋಷಿತರ ಧ್ವನಿಯಾಗಿ, ಸಮಾನತೆಯ ಹೋರಾಟಗಾರರಾಗಿ ಖ್ಯಾತಿ ಪಡೆದಿದ್ದ ಅರಸು ಅವರು ಜನಪರ ಕಾರ್ಯಗಳ ಮೂಲಕ ಜನನಾಯಕರಾದರು. ಭೂ ಸುಧಾರಣಾ ಕಾಯ್ದೆ ಫಲವೇ ಇಂದು ರೈತರು ಸಣ್ಣ ಹಿಡುವಳಿದಾರರು ಎಂದು ಕರೆಯಲ್ಪಡುತ್ತಿರುವುದು. ಬಡವರಿಗೂ ಜಮೀನು ದೊರೆತಿರುವುದು ಅವರ ದೂರದೃಷ್ಟಿಗೆ ಸಾಕ್ಷಿ. ಜೀವನದಲ್ಲಿ ಅವರ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ನಿಜವಾದ ಗೌರವ ಅವರಿಗೆ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.

ಕೋಟೆ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಬಸವರಾಜು ಮಾತನಾಡಿ, ದೇವರಾಜ ಅರಸು ಅವರು ತಮ್ಮ ಆಡಳಿತ ಚಾತುರ್ಯದಿಂದ ರಾಜ್ಯವನ್ನು ಮುನ್ನಡೆಸಿದ ಮಹಾನ್ ನಾಯಕರು. ಅವರು ಸದಾ ಶೋಷಿತರ ಪರವಾಗಿ ಧ್ವನಿ ಎತ್ತಿ ಮಾನವೀಯ ಮೌಲ್ಯ ಮೈಗೂಡಿಸಿಕೊಂಡರು. ಸಮಾಜ ಪರಿವರ್ತನೆಗೆ ದಾರಿದೀಪವಾದ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಸಮಾನತೆಯ ಹಕ್ಕು ಕಲ್ಪಿಸಿದರು ಎಂದು ಶ್ಲಾಘಿಸಿದರು.

ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್, ಗ್ರೇಡ್- 2 ತಹಸೀಲ್ದಾರ್ ಸಿ.ಸ್ವಾಮಿ, ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಉಳ್ಳಾಗಡ್ಡಿ ಇತರರಿದ್ದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net