ಒಂದೇ ಒಂದು ಕರೆ… ಬಾಲಕಿಗೆ ಬಾಂಬೆ ರಕ್ತದಾನ ಮಾಡಲು ಕೆಲಸ ಅರ್ಧಕ್ಕೆ ಬಿಟ್ಟು ದೂರದಿಂದ ಬಂದ ಚಾಲಕ

bambay blood
ಬಾಗಲಕೋಟೆ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯ ರಕ್ತ ಭಂಡಾರದಲ್ಲಿ ಅಪರೂಪದ ಬಾಂಬೆ ರಕ್ತ ದಾನ ಮಾಡಿದ ಮಹಾಂತೇಶ್ ತುಮ್ಮರಮಟ್ಟಿ ಹಾಗೂ ಆಸ್ಪತ್ರೆಯ ರಕ್ತ ಭಂಡಾರದ ಮುಖ್ಯಸ್ಥ, ಪ್ರಾಧ್ಯಾಪಕ ಡಾ. ಕೇಶವ್ ಕುಲಕರ್ಣಿ.
Published on


ಅಶೋಕ ಶೆಟ್ಟರ, ಬಾಗಲಕೋಟೆ: ಫಿಟ್ಸ್‌ನಿಂದ ಬಳಲುತ್ತಿದ್ದ ಬಾಲಕಿಯೊಬ್ಬಳಿಗೆ ತುರ್ತಾಗಿ ಬೇಕಾಗಿದ್ದ ಬಲು ಅಪರೂಪದ ‘ಬಾಂಬೆ ಬ್ಲಡ್’ (ಒಎಚ್) ಅನ್ನು ಚಾಲಕರೊಬ್ಬರು ದಾನಮಾಡಿ ಮಾನವೀಯತೆ ಮೆರೆದಿರುವ ಘಟನೆ ಬಾಗಲಕೋಟೆ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಬುಧವಾರ ನಡೆದಿದೆ.

ಬಾಗಲಕೋಟೆ ವಿದ್ಯಾಗಿರಿಯಲ್ಲಿ ಇರುವ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರ 15 ವರ್ಷದ ಮಗಳಿಗೆ ಫಿಟ್ಸ್ ಬಂದು ಆಸ್ಪತ್ರೆಗೆ ದಾಖಲಾಗಿದ್ದಳು. ಬಾಲಕಿಗೆ ನ್ಯುಮೋನಿಯಾ ಲಕ್ಷಣಗಳು ಇದ್ದು, ಹಿಮೋಗ್ಲೊಬಿನ್ ಪ್ರಮಾಣ 5.8 ಇತ್ತು. ಹೀಗಾಗಿ ರಕ್ತ ಹಾಕಬೇಕೆಂದು ವೈದ್ಯರು ತಿಳಿಸಿದ್ದರು.

ಆಸ್ಪತ್ರೆಯಲ್ಲಿ ಇರುವ ರಕ್ತ ಭಂಡಾರದಲ್ಲಿ ಬಾಲಕಿಯ ರಕ್ತ ಪರೀಕ್ಷೆ ಮಾಡಿದಾಗ ಒ+ ಗುಂಪಿನ ರಕ್ತ ಬೇಕು ಎನ್ನುವುದು ಗೊತ್ತಾಗಿದೆ. ಆದರೆ, ಅದೇ ಗುಂಪಿನ ರಕ್ತ ಪರೀಕ್ಷೆ ಮಾಡಿದಾಗ ಅದು ಹೊಂದಾಣಿಕೆ ಆಗುತ್ತಿಲ್ಲ ಎನ್ನುವುದು ವೈದ್ಯರ ಗಮನಕ್ಕೆ ಬಂದು, ಎಚ್(ಹ್ಯಾಂಟಿಜನ್) ಪರೀಕ್ಷೆ ಮಾಡಿದಾಗ ಬಾಲಕಿಗೆ ಬಾಂಬೆ ರಕ್ತದ ಗುಂಪು ಅವಶ್ಯತೆ ಇದೆ ಎನ್ನುವುದು ಗೊತ್ತಾಗಿದೆ.

ಆಸ್ಪತ್ರೆ ವೈದ್ಯರು, ಅಪರೂಪದ ಬಾಂಬೆ ರಕ್ತವನ್ನು ಹೊಂದಿರುವ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಯಲಗೂರ ಗ್ರಾಮದ ವಾಹನ ಚಾಲಕ ಮಹಾಂತೇಶ್ ತುಮ್ಮರಮಟ್ಟಿ ಅವರನ್ನು ಸಂಪರ್ಕಿಸಿ, ಬಾಲಕಿಯ ವಿಷಯ ತಿಳಿಸಿದಾಗ ತಕ್ಷಣವೇ ತನ್ನೆಲ್ಲ ಕೆಲಸವನ್ನು ಬಿಟ್ಟು ಆಸ್ಪತ್ರೆಗೆ ಬಂದು ಬಾಂಬೆ ರಕ್ತ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ ಎಂದು ಆಸ್ಪತ್ರೆ ರೋಗ ನಿಧಾನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಕೇಶವ ಕುಲಕರ್ಣಿ ಮಾಹಿತಿ ನೀಡಿದರು.

ಏನಿದು ಬಾಂಬೆ ರಕ್ತದ ಗುಂಪು: ಸಾಮಾನ್ಯವಾಗಿ ಎ, ಬಿ, ಎಬಿ, ಒ ಎನ್ನುವ ನಾಲ್ಕು ರಕ್ತದ ಗುಂಪುಗಳು ಇರುತ್ತವೆ. ಈ ಗುಂಪುಗಳಲ್ಲಿ ಎಚ್ (ಆಂಟಿಜನ್) ಎಲ್ಲರಲ್ಲೂ ಇರುತ್ತದೆ. ಬಹಳ ಅಪರೂಪಕ್ಕೆ ಕಂಡು ಬರುವ ಬಾಂಬೆ ರಕ್ತದಲ್ಲಿ (ಒಎಚ್) ‘ಎಚ್’ ಪ್ರತಿಜನಕ (ಆಂಟಿಜನ್)ದ ಅನುಪಸ್ಥಿತಿ ಮತ್ತು ‘ಎಚ್’ ವಿರೋಧಿ ಪ್ರತಿಕಾಯಗಳ ಉಪಸ್ಥಿತಿ ಇರುತ್ತದೆ. ಈ ರಕ್ತದ ಗುಂಪು ‘ಎಚ್’ ಪ್ರತಿಜನಕದ ಅನುಪಸ್ಥಿತಿಯ ಕಾರಣ ‘ಒ’ ರಕ್ತದ ಗುಂಪಿನಲ್ಲಿ ಬರುತ್ತದೆ. ಆದರೆ ಇದು ಅಡ್ಡ ಹೊಂದಾಣಿಕೆ ಸಮಯದಲ್ಲಿ ‘ಒ’ ಗುಂಪಿನ ರಕ್ತದೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಹೀಗಾಗಿ ಇಂಥಹ ರೋಗಿಗಳಿಗೆ ಇದೇ ರೀತಿ ಇರುವ ಬಾಂಬೆ ರಕ್ತದ ಗುಂಪಿನ ರಕ್ತವನ್ನೇ ನೀಡಬೇಕಾಗುತ್ತದೆ ಎನ್ನುತ್ತಾರೆ ವೈದ್ಯ ಡಾ. ಕೇಶವ್ ಕುಲಕರ್ಣಿ.

ರಕ್ತದಾನಿ ಯಲಗೂರ ಗ್ರಾಮದ ಮಹಾಂತೇಶ್ ಹಿಂದೊಮ್ಮೆ ರಕ್ತದಾನ ಮಾಡಲು ಆಸ್ಪತ್ರೆಗೆ ಬಂದಾಗ ಅವರಲ್ಲಿ ‘ಒ’ ಬಾಂಬೆ ರಕ್ತದ ಗುಂಪು ಇರುವುದು ಗೊತ್ತಾಗಿತ್ತು. ಅದರಂತೆ ಒಂದು ವರ್ಷದ ಹಿಂದೆ ಇದೇ ರೀತಿ ತುರ್ತು ಸಂದರ್ಭದಲ್ಲಿ ರೋಗಿಯೊಬ್ಬರಿಗೆ ಬಾಂಬೆ ರಕ್ತ ಬೇಕಾಗಿದ್ದಾಗ ಮಹಾಂತೇಶ್ ಅವರನ್ನು ಕರೆಸಿ ರಕ್ತ ಕೊಡಿಸಿದ್ದರು.


ಇದೀಗ ಬಾಲಕಿ ಜೀವ ಉಳಿಸಲು ತುರ್ತಾಗಿ ಬೇಕಿದ್ದ ಸಂದರ್ಭದಲ್ಲಿ ಮಹಾಂತೇಶ್ ಬಂದು ಯಾವುದೇ ಫಲಾಪೇಕ್ಷೆ ಇಲ್ಲದೇ ರಕ್ತದಾನ ಮಾಡಿದ್ದಾರೆ. ಅದರಲ್ಲಿನ ಪ್ಲಾಸ್ಮಾ ತೆಗೆದು ಅಂದಾಜು 360 ರಿಂದ 370 ಎಂಎಲ್ ಕೆಂಪು ರಕ್ತ ಕಣ ಹಾಕಲಾಗಿದ್ದು, ಇದೀಗ ಬಾಲಕಿಯ ಹಿಮೋಗ್ಲೊಬಿನ್ ಪ್ರಮಾಣ 8 ರಿಂದ 8.5 ವರೆಗೂ ಬಂದಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯ ಡಾ. ಕೇಶವ್ ಕುಲಕರ್ಣಿ ‘ವಿಜಯವಾಣಿ’ಗೆ ತಿಳಿಸಿದರು.

ಶ್ರೀಶೈಲಕ್ಕೆ ಹೋಗುವುದು ಬಿಟ್ಟ ಬಂದ ಮಹಾಂತೇಶ್: ಯಲಗೂರ ಗ್ರಾಮದ ಮಹಾಂತೇಶ್ ವಾಹನ ಚಾಲಕ ಆಗಿದ್ದಾರೆ. ಬುಧವಾರ ಬಾಡಿಗೆ ಮೇಲೆ ಶ್ರೀಶೈಲಕ್ಕೆ ಹೊರಟಿದ್ದರು. ವಿಜಯಪುರ ಜಿಲ್ಲೆ ತಾಳಿಕೋಟಿ ಬಳಿ ಹೋಗುತ್ತಿದ್ದಾಗ ಆಸ್ಪತ್ರೆಯಿಂದ ಕರೆ ಬಂದು ತುರ್ತಾಗಿ ರಕ್ತದ ಅವಶ್ಯಕತೆ ಇರುವ ಬಗ್ಗೆ ವಿವರಿಸಿದ್ದಾರೆ. ಆಗ ತಕ್ಷಣವೇ ಬೇರೊಬ್ಬ ಚಾಲಕನನ್ನು ವಾಹನಕ್ಕೆ ಹೊಂದಿಸಿ, ಬಸ್ ಹಿಡಿದುಕೊಂಡು ಬಾಗಲಕೋಟೆಗೆ ಬಂದು ರಕ್ತದಾನ ಮಾಡಿ ಹೋಗಿ ಬಾಲಕಿಯ ಪ್ರಾಣ ಕಾಪಾಡಿದ್ದಾರೆ.

ನಾನು ವಾಹನ ತೆಗೆದುಕೊಂಡು ಶ್ರೀಶೈಲಕ್ಕೆ ಹೊರಟಿದ್ದೆ. ಮಾರ್ಗ ಮಧ್ಯ ಇದ್ದಾಗ ವೈದ್ಯರು ನನಗೆ ಕರೆ ಮಾಡಿ ತುರ್ತು ಅಗತ್ಯದ ಬಗ್ಗೆ ಹೇಳಿದರು. ಇನ್ನು ಚಿಕ್ಕವಯಸ್ಸಿನ ಮಗಳು, ನನ್ನಿಂದ ಆ ಜೀವ ಉಳಿಯುತ್ತದೆಯಲ್ಲ ಎಂದು ಆಸ್ಪತ್ರೆಗೆ ಬಂದು ರಕ್ತ ಕೊಟ್ಟು ಬಂದಿ. ಬಾಲಕಿ ಆರೋಗ್ಯವಾಗಿ ಮನೆಗೆ ಹೋದರೆ ಅದುವೇ ನನಗೆ ಬಹಳ ಖುಷಿ.

ಮಹಾಂತೇಶ್ ತುಮ್ಮರಮಟ್ಟಿ ಬಾಂಬೆ ರಕ್ತದ ದಾನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net