ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಎ.ರಾಮೇಗೌಡ ಪುರಸ್ಕೃತ

A Ramegowda
Published on

ಮೈಸೂರು: ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಮ್ಮ ಕಾಲೇಜಿಗೆ ಪ್ರಶಸ್ತಿ ದೊರೆತಿರುವುದು ಹೆಮ್ಮೆ ಸಂಗತಿ ಎಂದು ರಾಜ್ಯ ಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಪುರಸ್ಕೃತ ಹುಣಸೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎ.ರಾಮೇಗೌಡ ಸಂತಸ ಹಂಚಿಕೊಂಡರು.
2022ರಲ್ಲಿ ಉಪನ್ಯಾಸಕ ಸದಾನಂದ, 2023ರಲ್ಲಿ ಎಚ್.ಎನ್.ಗಿರೀಶ್ ಅವರಿಗೆ ರಾಜ್ಯದ ಉತ್ತಮ ಉಪನ್ಯಾಸಕ ಪ್ರಶಸ್ತಿ ದೊರೆತಿತ್ತು. ಈ ವರ್ಷ ಎಚ್.ಎನ್.ಗಿರೀಶ್‌ಗೆ ರಾಷ್ಟ್ರಮಟ್ಟದ ಉತ್ತಮ ಉಪನ್ಯಾಸಕ ಜತೆಗೆ ನನಗೆ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ದೊರೆತಿರುವುದು ಸಂತೋಷವಾಗಿದೆ ಎಂದರು.
ಹುಣಸೂರು ತಾಲೂಕಿನಲ್ಲಿ ಮಾದರಿಯಾಗಿರುವ ನಮ್ಮ ಕಾಲೇಜಿಗೆ ಸುತ್ತಮುತ್ತಲ ಗ್ರಾಮೀಣ ಪ್ರದೇಶ ಅದರಲ್ಲೂ ಹಾಡಿಯಿಂದ ಹೆಣ್ಣು ಮಕ್ಕಳು ಕಲಿಯಲು ಬರುತ್ತಾರೆ. ವಿಜ್ಞಾನ, ಕಲೆ, ವಾಣಿಜ್ಯ ಮೂರು ವಿಭಾಗದಲ್ಲಿಯೂ ಹಲವು ಸಂಯೋಜನೆಗಳನ್ನು ಹೊಂದಿದ್ದು, ಉಪನ್ಯಾಸಕ ವರ್ಗ ಕಾಳಜಿ, ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಘ, ಸಂಸ್ಥೆಗಳು, ವಿವಿಧ ಕಂಪನಿಗಳ ಸಿಎಸ್‌ಆರ್ ನಿಧಿಯಿಂದ ಅತ್ಯಾಧುನಿಕ ಪ್ರಯೋಗಾಲಯ, ಕಟ್ಟಡ ನಿರ್ಮಿಸಲಾಗಿದೆ. 1250ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಇನ್‌ಪೋಸಿಸ್‌ನಿಂದ ಸುಸಜ್ಜಿತ ಶೌಚಗೃಹ ನಿರ್ಮಾಣಗೊಳ್ಳುತ್ತಿದೆ. ಕೆಲವೇ ದಿನಗಳಲ್ಲಿ ಸೇವೆಗೆ ಲಭ್ಯವಾಗಲಿದೆ. ಪಠ್ಯದ ಜತೆಗೆ ಸಾಮಾಜಿಕ ಜವಾಬ್ದಾರಿ, ಪರಿಸರ ಕಾಳಜಿ, ವೈಯಕ್ತಿಕ ಆರೋಗ್ಯ, ವಿಜ್ಞಾನ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು. ಶಿಕ್ಷಣ ಇಲಾಖೆ ಇಬ್ಬರನ್ನು ಗುರುತಿಸಿರುವುದು ಸೇವೆಗೆ ದೊರೆತ ಫಲ ಎಂದರು.
ಹುಣಸೂರಿನ ಹಿಂದಿನ ಶಾಸಕರು ಹಾಗೂ ಇಂದಿನ ಶಾಸಕರು ಕಾಲೇಜಿಗೆ ಅಗತ್ಯವಾದ ಸೌಲಭ್ಯಗಳನ್ನು ನೀಡುತ್ತಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅಧಿಕಾರಿ ವರ್ಗ, ಬೋಧಕ, ಬೋಧಕೇತರರು, ಪಾಲಕರ ಸಹಕಾರರಿಂದ ಯಾವುದೇ ಖಾಸಗಿ ಸಂಸ್ಥೆಗಳಿಗೂ ಕಡಿಮೆ ಇಲ್ಲದಂತೆ ಕಾಲೇಜು ಅದರ್ಶವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net