

ಕೈಲಾಂಚ: ರಾಮನಗರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಸ್ವಾಮಿಯ ಮಹಾರಥೋತ್ಸವ ಮೇ 16ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
ಕರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಜಾತ್ರಾ ಮಹೋತ್ಸವಕ್ಕೆ ಬ್ರೇಕ್ ಬಿದ್ದಿತ್ತು. ಈ ವರ್ಷ ಅದ್ಧೂರಿಯಾಗಿ ರಥೋತ್ಸವ ಮತ್ತು ಜಾತ್ರೆ ಆಚರಿಸಲು ಮುಜರಾಯಿ ಇಲಾಖೆ ಮತ್ತು ಅಕ್ಕಪಕ್ಕದ ಸೇವಾ ಗ್ರಾಮಗಳು ಸಿದ್ಧತೆ ನಡೆಸಿವೆ.
ಧಾರ್ಮಿಕ ದತ್ತಿ ಇಲಾಖೆ, ದಾಸೋಹ ಮಠ, ಶ್ರೀ ರೇವಣಸಿದ್ದೇಶ್ವರಸ್ವಾಮಿ ಅಭಿವೃಧ್ಧಿ ಸೇವಾ ಟ್ರಸ್ಟ್ ವತಿಯಿಂದ ಹಾಗೂ ಸೇವಾ ಗ್ರಾಮಗಳಾದ ಅವ್ವೇರಹಳ್ಳಿ, ನೆಲಮಲೆ, ಕೆ.ಜಿ. ಹೊಸಹಳ್ಳಿ, ಅಮ್ಮನಪುರ, ತೆಂಗಿನಕಲ್ಲು, ದೇವರದೊಡ್ಡಿ, ಕುರುಬಳ್ಳಿದೊಡ್ಡಿ, ಕೋಟಹಳ್ಳಿ, ಪೂಜಾರಿದೊಡ್ಡಿ, ಕೆರೆಮೇಗಳದೊಡ್ಡಿ, ಹುಲಿಕೆರೆ, ಗುನ್ನೂರು, ಕಡ್ಲೆ ಸುಬ್ಬಯ್ಯನದೊಡ್ಡಿ, ಸಾಹುಕಾರ್ದೊಡ್ಡಿ, ಸಬ್ಬಕೆರೆ ಗ್ರಾಮಸ್ಥರಿಂದ ಅನ್ನಸಂತರ್ಪಣೆ ನಡೆಯುತ್ತದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ. ಯೇಸುರಾಜ್ ತಿಳಿಸಿದ್ದಾರೆ.