

ರಾಮನಗರ: ಜಿಲ್ಲೆಯಲ್ಲಿ ಸೋಮವಾರ ಮುಂಜಾನೆಯಿಂದಲೇ ವರುಣನ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಜಿಲ್ಲೆಯಾಧ್ಯಂತ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.
ಮುಂಜಾನೆ 4 ಗಂಟೆ ಸುಮಾರಿಗೆ ಬಿರುಸಿನಿಂದಲೇ ಆರಂಭಗೊಂಡ ಮಳೆ 8 ಗಂಟೆ ಕಳೆದರೂ ಬಿಡುವು ನೀಡದೆ ಧಾರಾಕಾರವಾಗಿ ಸುರಿದಿದೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ನೀರಿನಲ್ಲಿ ವಾಹನ ಚಲಾಯಿಸಲು ಮುಂದಾದ ಪರಿಣಾಮ ಕಾರೊಂದು ನೀರಿನಲ್ಲಿ ಮುಳಿಗಿದೆ. ಬಿಳಗುಂಬ ಕ್ರಾಸ್ ಬಳಿ ಮಳೆ ನೀರಲ್ಲಿ ಖಾಸಗಿ ಬಸ್ ಅರ್ಧದಷ್ಟು ಮುಳುಗಿದೆ. ಇನ್ನು ರೈಲೆ ಹಳಿಗಳೂ ಜಾಲವೃತಗೊಂಡಿದ್ದು, ನೀರ ಮೇಲೆ ರೈಲು ಸಂಚರಿಸುತ್ತಿರುವಂತೆ ಗೋಚರಿಸುತ್ತಿದೆ.
ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲೂ ವ್ಯಾಪಕ ಮಳೆಯಾಗಿದೆ. ಎಂದಿನಂತೆ ಕೆಲಸಗಳಿಗೆ ತೆರಳಬೇಕಿದ್ದ ಜನತೆ ತೊಂದರೆ ಅನುಭವಿಸಿದ್ದಾರೆ. ಗೌರಿ-ಗಣೇಶ ಹಬ್ಬದ ಹಿನ್ನೆಲೆ ಮಾರುಕಟ್ಟೆಯಲ್ಲಿ ನಡೆಯಬೇಕಿದ್ದ ವ್ಯಾಪಾರಕ್ಕೂ ಕತ್ತರಿ ಬಿದ್ದಿದೆ. ಮಾರುಕಟ್ಟೆಗಳ ಬಳಿ ಜನತೆ ಸುಳಿಯದಂತಾಗಿದ್ದು, ವ್ಯಾಪಾರಾಸ್ಥರು ಮಳೆ ನಿಲ್ಲುವಿಕೆಗಾಗಿಯೇ ಪ್ರಾರ್ಥನೆ ಮಾಡುತ್ತಿದ್ದಾರೆ.
ಸಂಚಾರ ಬಂದ್: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಭಾರಿ ನೀರು ಸಂಗ್ರಹವಾಗಿರುವ ಕಾರಣದಿಂದಾಗಿ ಸಂಚಾರ ಬಂದ್ ಆಗಿದೆ. ರಾಮನಗರ ಬಸವನಪುರ, ಕನಕಪುರ ಸರ್ಕಲ್ನಲ್ಲಿ ನೀರು ರಸ್ತೆ ಮೇಲೆಯೇ ಹರಿಯುತ್ತಿರುವ ಕಾರಣ ವಾಹನಗಳು ಸಾಲುಗಟ್ಟಿ ನಿಂತಿವೆ.