

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ಗೆ 'ಶ್ರೀನಿವಾಸದ್ವಯರು' ಸೆಡ್ಡು ಹೊಡೆದಿದ್ದಾರೆ. ಕಾಂಗ್ರೆಸ್ ಶಾಸಕರ ಜತೆಯಲ್ಲೇ ಮತದಾನ ಕೇಂದ್ರಕ್ಕೆ ಆಗಮಿಸಿದ ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ್ಗೌಡ, ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದರು. ಅತ್ತ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ್ ಮತಪೆಟ್ಟಿಗೆಗೆ ಖಾಲಿ ಪತ್ರ ಹಾಕಿದ್ದು, ಇವರ ಮತ ಅಸಿಂಧುಗೊಂಡಿದೆ.
ಶಾಸಕರು ಮತ ಪತ್ರದಲ್ಲಿ ನಮೂದು ಮಾಡಿದ ನಂತರ ತಮ್ಮ ಪಕ್ಷದ ಏಜೆಂಟ್ ಇರುವ ಕ್ಯಾಬಿನ್ಗೆ ತೆರಳಬೇಕು. ಆದರೆ, ಶ್ರೀನಿವಾಸಗೌಡರು ಜೆಡಿಎಸ್ ಕ್ಯಾಬಿನತ್ತ ಗಮನ ಕೊಡದೇ ಮತ ಪೆಟ್ಟಿಗೆಗೆ ಮತ ಪತ್ರ ಹಾಕಿ ಸಿದ್ದರಾಮಯ್ಯರನ್ನು ಭೇಟಿಯಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ಗೌಡ, ಅಡ್ಡ ಮತದಾನ ಮಾಡಿರುವುದಾಗಿ ಒಪ್ಪಿಕೊಂಡರು. ನಾನು ಕಾಂಗ್ರೆಸ್ನಲ್ಲಿದ್ದವ. ಜೆಡಿಎಸ್ನಿಂದ ಹೊರ ಬಂದಿದ್ದೇನೆ ಎಂದು ಸಂದೇಶ ರವಾನಿಸಿದರು.
ಗುಬ್ಬಿ ಶಾಸಕ ಶ್ರೀನಿವಾಸ್, ನಿಯಮದ ಪ್ರಕಾರ ಮತ ಪತ್ರದಲ್ಲಿ ಅಭ್ಯರ್ಥಿ ಹೆಸರಿನ ಮುಂದೆ ತಮ್ಮ ಗುರುತು ಹಾಕದೆ ಖಾಲಿ ಮತ ಪತ್ರವನ್ನು ಬಾಕ್ಸ್‌ಗೆ ಹಾಕಿದ್ದಾರೆ. ಆ ಮೂಲಕ ಯಾರಿಗೂ ಮತ ಹಾಕಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ನ ಪೋಲಿಂಗ್ ಏಜೆಂಟ್ ಎಚ್.ಡಿ. ರೇವಣ್ಣ, ಗುಬ್ಬಿ ಶ್ರೀನಿವಾಸ್ ಯಾರಿಗೂ ಮತ ಹಾಕಿಲ್ಲ. ನನಗೆ ಖಾಲಿ ಮತ ಪತ್ರ ತೋರಿಸಿದ್ರು ಎಂದಿದ್ದಾರೆ.