

ಬೆಂಗಳೂರು: ಎರಡು ವಾರದಿಂದ ರಾಜ್ಯದಲ್ಲಿ ಆರ್ಭಟಿಸುತ್ತಿದ್ದ ಮಳೆ ಕೊನೆಗೂ ಬಿಡುವು ಕೊಟ್ಟಿದೆ. ಬುಧವಾರ ಕೆಲ ಭಾಗಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ಬೆಳಗಾವಿಯಲ್ಲಿ ಆ.11ರಂದು ಹೆಚ್ಚು ಮಳೆ ಬೀಳುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಆ.12ರಿಂದ ಕರಾವಳಿ, ಮಲೆನಾಡಿನಲ್ಲಿ ಮಳೆ ಪ್ರಮಾಣ ಇಳಿಕೆಯಾದರೆ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಈಗಾಗಲೇ ಕುಂಠಿತವಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಜೂ 1ರಿಂದ ಆ.10ರವರೆಗೆ ರಾಜ್ಯಾದ್ಯಂತ 553 ಮಿ.ಮೀ. ಮಳೆಯಾಗುವ ಬದಲು 702 ಮಿ.ಮೀ. ಮಳೆಯಾಗಿದ್ದು, ಶೇ.27 ವಾಡಿಕೆಗಿಂತ ಹೆಚ್ಚು ಬಿದ್ದಿದೆ.
ಮೋಡ ಕವಿದ ವಾತಾವರಣ ಇರಲಿದ್ದು, ಕೆಲ ಭಾಗಗಳಲ್ಲಿ ಬಿಸಿಲು ಜತೆಗೆ ಆಗಾಗ್ಗೆ ಸಾಧಾರಣ ಮಳೆ ಬೀಳಲಿದೆ. ರಾಜ್ಯಾದ್ಯಂತ ಮುಂದಿನ ದಿನಗಳಲ್ಲಿ ಮಳೆ ಕುಂಠಿತವಾಗಲಿದೆ ಎಂದು ಹವಾಮಾನ ವೈಪರಿತ್ಯ ವಿಜ್ಞಾನ ಡಾ.ಎಂ.ಬಿ.ರಾಜೇಗೌಡ ಹೇಳಿದ್ದಾರೆ.