

ಬೆಂಗಳೂರು: ಎದ್ದು-ಬಿದ್ದು ಓಟ, ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ ದರ್ಶನ, ಪ್ರತಿ ಮೂಲೆಗಳಲ್ಲಿ ದುರ್ವಾಸನೆ ಕಾಟ. ಇದು, ಬೆಂಗಳೂರಿನಲ್ಲಿ ಭಾನುವಾರ ನಡೆದ ‘ ಟಿಸಿಎಸ್ ವಿಶ್ವ 10ಕೆ ಬೆಂಗಳೂರು’ ಓಟದಲ್ಲಿ ಕಂಡುಂಡ ಕೆಟ್ಟ ಅನುಭವ.
ಬೆಂಗಳೂರು ನಗರಾಭಿವೃದ್ಧಿ ಹೊಣೆ ಹೊತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸಂಸದ ತೇಜಸ್ವಿಸೂರ್ಯ ಬಹಿರಂಗಪತ್ರ ಬರೆದು, ಕಹಿ ಅನುಭವ, ಓರೆ-ಕೋರೆಗಳನ್ನು ಪ್ರಸ್ತಾಪಿಸಿದ್ದು, ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿಷ್ಠಿತ ‘ಟಿಸಿಎಸ್ ವಿಶ್ವ 10ಕೆ ಬೆಂಗಳೂರು ಓಟ’ಕ್ಕೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮದಲ್ಲಿ ನೀವು (ಡಿಸಿಎಂ, ಮುಖ್ಯ ಆಯುಕ್ತ) ಭಾಗವಹಿಸಿದ್ದು ಸಂತೋಷ ತಂದಿತು. ಕಾರ್ಯಕ್ರಮಕ್ಕೆ ನೀಡಿದ ಮಹತ್ವ, ‘ಬ್ರ್ಯಾಂಡ್ ಬೆಂಗಳೂರು’ ನಿರ್ಮಾಣ, ನಾಗರಿಕರ ಸ್ವಾಸ್ಥ್ಯದ ಬಗ್ಗೆ ಕಾಳಜಿಗೆ ಹೆಮ್ಮೆಯೂ ಅನಿಸಿತು.
ಆದರೆ ಬೆಂಗಳೂರಿನ ಸಂಸದನಾಗಿಯಲ್ಲ, ಸಿಟ್ಟು ಹಾಗೂ ಬೇಸರಗೊಂಡ ನಾಗರಿಕ, ಓಟದಲ್ಲಿ ಸ್ವತಃ ಪಾಲ್ಗೊಂಡು, ಜತೆಗಿದ್ದವರ ಆಕ್ರೋಶವನ್ನು ಹಂಚಿಕೊಳ್ಳಲೆಂದು ಈ ಪತ್ರ ಬರೆದಿರುವೆ ಎಂದು ತೇಜಸ್ವಿ ಸೂರ್ಯ ಗಮನಸೆಳೆದಿದ್ದಾರೆ.
ವಿಶ್ವದ ಹೆಸರಾಂತ ಅಥ್ಲೀಟ್‌ಗಳು, ಹಿರಿಯ ನಾಗರಿಕರು, ಪ್ರಮುಖರು ಸೇರಿ 40 ಸಾವಿರಕ್ಕೂ ಹೆಚ್ಚು ಜನರು ಹೆಮ್ಮೆಯ ಓಟದಲ್ಲಿ ಭಾಗವಹಿಸಿದ್ದರು. ವ್ಯಾಪಾರ-ವಹಿವಾಟು ಕೇಂದ್ರ ಬಿಂದುವಾಗಿರುವ ಮಾರ್ಗಗಳು ಸೇರಿ ಗುಂಡಿಗಳಿಲ್ಲದ ಉತ್ತಮ ರಸ್ತೆಗಳೇ ಕಾಣಲಿಲ್ಲ.
ಓಟದಲ್ಲಿ ಪಾಲ್ಗೊಂಡವರು ಎಡವಿ ಬೀಳುವುದು, ಎದ್ದು ಓಡುವುದು, ಜಾರಿ ಬೀಳದಂತೆ ಹಿರಿಯ ನಾಗರಿಕರ ಒದ್ದಾಟ, ಗಾಲಿ ಕುರ್ಚಿಯಲ್ಲಿದ್ದವರು ಮುಗ್ಗರಿಸಿ ಬೀಳದಂತೆ ತಡೆಯುವುದೇ ದುಸ್ತರವಾಯಿತು.
ಯಾವುದೇ ಮಾರ್ಗದಲ್ಲಿ ಮೂಲ ಸವಲತ್ತುಗಳು ಸುಸ್ಥಿತಿಯಲ್ಲಿದ್ದಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿ, ಮುರಿದ ಪಾದಗಟ್ಟೆಗಳು, ಬಿರುಕು ಬಿಟ್ಟು ಮೂಲೆಗಳು, ಕೊಳಕಿನ ಗಬ್ಬು ವಾಸನೆಯು ಇಡೀ ನಗರದ ಬಗ್ಗೆ ಕೆಟ್ಟ ಚಿತ್ರಣವನ್ನು ಬಿಂಬಿಸಿತು ಎಂದು ತೇಜಸ್ವಿ ಸೂರ್ಯ ಅಲವತ್ತುಕೊಂಡಿದ್ದಾರೆ.
ವಿಶ್ವದ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಕೊರತೆಗಳು, ಲೋಪ-ದೋಷಗಳು ಕಣ್ಣಿಗೆ ರಾಚಿದವು. ಇಂತಹ ದುಃಸ್ಥಿತಿಯಲ್ಲಿರುವುದಕ್ಕೆ ಕನಲುವಂತಾಯಿತು. ‘ಬೆಂಗಳೂರು’ ವಿಶ್ವ ಬ್ರ್ಯಾಂಡ್ ಆಗಲು ಬೇಕಾದ ಅರ್ಹತೆಯನ್ನು ಹೊಂದಿದ್ದು, ಮೂಲ ಸವಲತ್ತುಗಳನ್ನು ಸುಧಾರಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ತೇಜಸ್ವಿ ಸೂರ್ಯ ಈ ಪತ್ರದಲ್ಲಿ ಕಳಕಳಿ ವ್ಯಕ್ತಪಡಿಸಿದ್ದಾರೆ.