

ಕೊಳ್ಳೇಗಾಲ: ಹಿರಿಯ ಮುತ್ಸದ್ಧಿ, ಮಾಜಿ ರಾಜ್ಯಪಾಲ ದಿವಗಂತ ಬಿ.ರಾಚಯ್ಯ ಅವರ ಪುತ್ರ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ನೀಡಬೇಕೆಂದು ಕೊಳ್ಳೇಗಾಲ ನಗರಸಭೆ ನಾಮ ನಿರ್ದೇಶಿತ ಸದಸ್ಯ ಹಾಗೂ ದಲಿತ ಮುಖಂಡ ಸ್ವಾಮಿನಂಜಪ್ಪ ಒತ್ತಾಯಿಸಿದರು.
ಚಾಮರಾಜನಗರ ಜಿಲ್ಲೆಯ ದಲಿತ ಸಮುದಾಯದ ನಾಯಕ ಎ.ಆರ್.ಕೃಷ್ಣಮೂರ್ತಿ ಅವರು ಜನಪರ ಕಾಳಜಿಯುಳ್ಳವರು ಹಾಗೂ ಅಭಿವೃದ್ಧಿ ಚಿಂತಕರಾಗಿದ್ದಾರೆ. ಜಿಲ್ಲೆಯಾದ ಬಳಿಕ ದಲಿತ ಸಮುದಾಯ ಮುಖಂಡರಿಗೆ ಸಚಿವ ಸ್ಥಾನ ದೊರೆತಿಲ್ಲ. ಹಾಗಾಗಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
1994, 1999, 2023ರಲ್ಲಿ ಶಾಸಕರಾಗಿರುವ ಎ.ಆರ್.ಕೃಷ್ಣಮೂರ್ತಿ ಅವರು ಇಡೀ ಜಿಲ್ಲೆಯ ನಾಡಿಮಿಡಿತ ಅರಿತಿದ್ದಾರೆ. ತಮ್ಮದೆ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಅವರಿಗೆ ಸಚಿವ ಸ್ಥಾನವನ್ನು ಕಾಂಗ್ರೆಸ್ ಸರ್ಕಾರ ನೀಡಿದರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಾಗುವ ಜತೆಗೆ ಪಕ್ಷ ಬಲವರ್ಧನೆಗೊಳ್ಳುತ್ತದೆ ಎಂದರು.
19 ವರ್ಷ ಅಧಿಕಾರ ಇಲ್ಲದಿದ್ದರೂ ಅವರು ಜನರೊಂದಿಗೆ ಇದ್ದರು. ಗೆದ್ದರೆಂದು ಹಿಗ್ಗದೆ, ಸೋತೆನೆಂದು ಕುಗ್ಗದೆ ಜನ ಸೇವೆಗೆ ಮೊದಲು ಆದ್ಯತೆ ನೀಡುತ್ತಿದ್ದರು. ಆದ್ದರಿಂದಲೆ ಕೃಷ್ಣಮೂರ್ತಿ ಅವರನ್ನು 2023ನೇ ಚುನಾವಣೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮತ ನೀಡಿ ಜನರು ಆಶೀರ್ವಾದ ಮಾಡಿದ್ದಾರೆ. ರಾಜ್ಯದಲ್ಲಿ ಹೆಚ್ಚು ಮತ ಪಡೆದ ಶಾಸಕರಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ಅಂತೆಯೇ, ಎ.ಆರ್.ಕೆ ಅವರು ಜಿಲ್ಲೆಯ ಎಲ್ಲ ಧರ್ಮ ಹಾಗೂ ವರ್ಗದ ಜನರ ವಿಶ್ವಾಸಗಳಿಸಿದ್ದಾರೆ. ನೂರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿಗೊಳಿಸಿದ್ದಾರೆ. ಆಡಳಿತದಲ್ಲಿ ಬಡವರಿಗೆ ಮೊದಲ ಆದ್ಯತೆ ನೀಡಿದ್ದಾರೆ. ಹಾಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಜಿಲ್ಲೆಯ ಅಭಿವೃದ್ಧಿಗಾಗಿ ಎ.ಆರ್. ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕಿದೆ ಎಂದು ಒತ್ತಾಯಿಸಿದರು.