

ಮೈಸೂರು: ಕರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಪ್ರತಿ ಭಾನುವಾರ ಕರ್ಫ್ಯೂ ಮಾದರಿಯ ಲಾಕ್‌ಡೌನ್ ಘೋಷಿಸಲಾಗಿದ್ದು, ಎರಡನೇ ಭಾನುವಾರ ನಗರದಲ್ಲಿ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜನ ಹಾಗೂ ವಾಹನ ಸಂಚಾರ ವಿರಳವಾಗಿ ನಗರದ ಹೃದಯ ಭಾಗ ಸಂಪೂರ್ಣ ಸ್ತಬ್ಧವಾಗಿತ್ತು.
ಸಾಮಾನ್ಯವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಜೆ ದಿನದಂದು ಹೆಚ್ಚಿನ ವಹಿವಾಟು ನಡೆಯುವುದಿಲ್ಲ. ಅಲ್ಲದೆ, ಜನ ಹಾಗೂ ವಾಹನ ಸಂಚಾರ ಕೂಡ ವಿರಳ. ಆದರೆ, ಇದೀಗ ಲಾಕ್‌ಡೌನ್ ಸಹ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಬಹುಪಾಲು ಜನರು ನಗರದತ್ತ ಮುಖ ಮಾಡಲು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಬಿಕೋ ಅನ್ನುತಿತ್ತು. ವೈದ್ಯಕೀಯ ಸೇರಿದಂತೆ ವಿವಿಧ ತುರ್ತು ಅವಶ್ಯಕತೆ ಇರುವ ಕೆಲವರು ಮಾತ್ರ ನಗರದಲ್ಲಿ ಸಂಚರಿಸುತ್ತಿದ್ದ ದೃಶ್ಯ ಕಂಡು ಬಂತು.
ನಿತ್ಯ ಜನ ಹಾಗೂ ವಾಹನಗಳಿಂದ ತುಂಬಿ ತುಳುಕುತ್ತಿದ್ದ ನಗರದ ಸಯ್ಯಜಿರಾವ್, ಅಶೋಕ, ಬಿಎಂ, ಎಂಜಿ, ಡಿ. ದೇವರಾಜ ಅರಸು, ಜೆಎಲ್‌ಬಿ ಹಾಗೂ ಇರ್ವಿನ್ ರಸ್ತೆ ಬಿಕೋ ಅನ್ನುತಿತ್ತು. ಅದೇ ರೀತಿ ಕೃಷ್ಣರಾಜ, ಚಾಮರಾಜ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳು ಸಹ ಖಾಲಿ ಖಾಲಿಯಾಗಿ ಕಾಣುತ್ತಿದ್ದವು.
ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಹೀಗಾಗಿ ನಗರದ ಗ್ರಾಮಾಂತರ, ನಗರ ಬಸ್ ನಿಲ್ದಾಣಗಳಲ್ಲಿ ಜನರಲ್ಲಿದೆ ಮೌನ ಆವರಿಸಿತ್ತು. ಆಟೋ, ಟ್ಯಾಕ್ಸಿಗಳು ಕೂಡ ರಸ್ತೆಗೆ ಇಳಿಯದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಕಂಡು ಬರಲಿಲ್ಲ. ಸರಕು ಸಾಗಿಸುವ ಕೆಲವೊಂದು ಗೂಡ್ಸ್ ವಾಹನಗಳು ಮಾತ್ರ ಸಂಚರಿಸುತ್ತಿದ್ದವು.
ಜನರು ಅನಗತ್ಯವಾಗಿ ಸಂಚರಿಸಿದರೆ ತಡೆಯುವ ಸಲುವಾಗಿ ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೆ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಕೆ ಮಾಡಿ ಒಂದೆಡೆಯಿಂದ ಮತ್ತೊಂದೆಡೆ ತೆರಳುತ್ತಿದ್ದವರನ್ನು ವಿಚಾರಿಸಿದ ನಂತರ ಕಳುಹಿಸಲಾಗುತ್ತಿತ್ತು. ಬೆಳಗ್ಗೆ 8.30ರವರೆಗೆ ನಗರದಲ್ಲಿ ಒಂದಷ್ಟು ಜನರು ಹಾಗೂ ಅಂಗಡಿ ಮುಂಗಟ್ಟು ಗಳು ತೆರೆದಿದ್ದು ಕಂಡು ಬಂತು. ಆದರೆ, ನಂತರ ಎಲ್ಲ ವರ್ತಕರು ಅಂಗಡಿಗಳನ್ನು ಬಂದ್ ಮಾಡಿದರು.
ದೇವರಾಜ ಮಾರುಕಟ್ಟೆಯಲ್ಲಿ ಕೆಲವು ವರ್ತಕರು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದರೂ ಗ್ರಾಹಕರು ಮಾರುಕಟ್ಟೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಸುಳಿಯಲಿಲ್ಲ. ಮಾರುಕಟ್ಟೆಯಲ್ಲಿ ಬಹುತೇಕ ಅಂಗಡಿಗಳು ಬಂದ್ ಆಗಿತ್ತು. ಜನರು ತರಕಾರಿ, ಹೂ-ಹಣ್ಣು ಖರೀದಿಗೂ ಮಾರುಕಟ್ಟೆಯತ್ತ ಮುಖ ಮಾಡಲಿಲ್ಲ. ವರ್ತಕರು ಗ್ರಾಹಕರಿಗೋಸ್ಕರ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ದೇವರಾಜ ಮಾರುಕಟ್ಟೆ ಬಳಿಯಲ್ಲಿಯೇ ಇರುವ ಮಾಂಸ ಮಾರುಕಟ್ಟೆ ಸಹ ತೆರೆದಿತ್ತು. ಆದರೆ, ಮಾಂಸ ಖರೀದಿಗೆ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿಲ್ಲ. ಬಹುತೇಕ ಜನರು ತಮ್ಮ ಬಡಾವಣೆಗಳಲ್ಲಿಯೇ ಮಾಂಸ ಹಾಗೂ ದಿನಸಿ ಖರೀದಿ ಮಾಡಲು ಆಸಕ್ತಿ ತೋರಿದ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡು ಬರಲಿಲ್ಲ.
ಜೈಲು ಹಕ್ಕಿಗಳಿಗೆ ಆತಂಕ
ಕರೊನಾ ವೈರಸ್ ಇದೀಗ ನಗರದ ಕೇಂದ್ರ ಕಾರಾಗೃಹ ನಿವಾಸಿಗಳಲ್ಲೂ ಆತಂಕ ಮೂಡಿಸಲು ಪ್ರಾರಂಭಿಸಿದೆ. ಕಾರಾಗೃಹದಲ್ಲಿ ಇದುವರೆಗೆ ಒಟ್ಟು ನಾಲ್ವರು ಕೈದಿಗಳಿಗೆ ಸೋಂಕು ಕಾಣಿಸಿಕೊಂಡಿದ್ದು, ಮತ್ತಷ್ಟು ಜನರಿಗೆ ಹರಡುವ ಆತಂಕ ಎದುರಾಗಿದೆ.
ಕಾರಾಗೃಹದಲ್ಲಿ 700ಕ್ಕೂ ಹೆಚ್ಚು ಕೈದಿಗಳು ಇದ್ದು, 120ಕ್ಕೂ ಹೆಚ್ಚು ಜೈಲು ಸಿಬ್ಬಂದಿ ಇದ್ದಾರೆ. ಕರೊನಾದಿಂದ ಕೈದಿಗಳು ಹಾಗೂ ಸಿಬ್ಬಂದಿಯನ್ನು ರಕ್ಷಿಸಲು ಕಾರಾಗೃಹವನ್ನು ಸ್ಯಾನಿಟೈಸ್ ಮಾಡಲಾಗಿದೆ. ಅಲ್ಲದೆ ಸಂದರ್ಶನಕ್ಕೆ ಬರುವವರಿಂದ ಸೋಂಕು ಹರಡುವುದನ್ನು ತಡೆಯಲು ಜನರ ಮೇಲೆ ಔಷಧ ಸಿಂಪಡಣೆ ಮಾಡುವ ಟನಲ್‌ಅನ್ನು ಕಾರಾಗೃಹ ಹೊರ ಭಾಗದಲ್ಲಿ ನಿರ್ಮಾಣ ಮಾಡಲಾಗಿದೆ.