ಸಾಮಾಜಿಕ ಕಾಳಜಿ ಮತ್ತು ಜವಾಬ್ದಾರಿ ಬೆಳೆಯಲು ಪ್ರಶ್ನಿಸುವ ಮನೋಭಾವದ ಅಗತ್ಯವಿದೆ: ಟಿ.ಸತೀಶ್ ಜವರೇಗೌಡ

22
Published on

ಮೈಸೂರು: ಯುವ ಸಮುದಾಯದಲ್ಲಿ ಸಾಮಾಜಿಕ ಕಾಳಜಿ ಮತ್ತು ಜವಾಬ್ದಾರಿ ಬೆಳೆಯಲು ಪ್ರಶ್ನಿಸುವ ಮನೋಭಾವದ ಅಗತ್ಯವಿದೆ. ಈ ಪ್ರಶ್ನಿಸುವ ಮನೋಭಾವದಿಂದಲೇ ವಿಚಾರಶೀಲತೆಯೂ ಇಮ್ಮಡಿಯಾಗಿ ಬೆಳೆಯುತ್ತದೆ ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಸಾಹಿತಿ ಟಿ.ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ತಾಲೂಕಿನ ಬಡಗಲಹುಂಡಿ ಗ್ರಾಮದಲ್ಲಿ ಆಯೋಜಿಸಿದ್ದ ’ವಾರ್ಷಿಕ ವಿಶೇಷ ಶಿಬಿರ’ದಲ್ಲಿ ಗುರುವಾರ ಭಾಗವಹಿಸಿ ’ಯುವ ಸಮುದಾಯದಲ್ಲಿ ಸಾಮಾಜಿಕ ಜವಾಬ್ದಾರಿಗಳು’ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಯುವ ಸಮುದಾಯ ಆದಷ್ಟು ಹೃದಯ ವೈಶಾಲ್ಯತೆ ಹೊಂದಿರಬೇಕು. ವೈಯಕ್ತಿಕ ಮತ್ತು ಕೌಟುಂಬಿಕ ನೆಲೆಯ ಮೀರಿ ಸಾಮಾಜಿಕ ನೆಲೆಯಲ್ಲಿ ಬದುಕಬೇಕು. ಸಮಾಜದಲ್ಲಿನ ನೆರೆಹೊರೆಯವರ ಹಿತವನ್ನು ಕಾಯಬೇಕು. ಸ್ವಾರ್ಥ ಕೇಂದ್ರಿತವಾಗಿ ಆಲೋಚಿಸದೆ ಇತರರ ಅಭ್ಯುದಯಕ್ಕೂ ಶ್ರಮಿಸಬೇಕು. ಜಾತೀಯತೆ, ಧರ್ಮಾಂಧತೆ, ಸ್ವಜನ ಪಕ್ಷಪಾತ, ಭ್ರಷ್ಟಾಚಾರಗಳಿಂದ ದೂರವಿರಬೇಕೆಂದು ಕರೆ ನೀಡಿದರು.

ಅಶಕ್ತ ವೃದ್ಧರು, ರೋಗಿಗಳು, ವಿಕಲಚೇತನರಿಗೆ ಅಗತ್ಯವಿದ್ದಾಗ ನೆರವಾಗಬೇಕು. ಮಹಿಳೆಯರ ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಅದನ್ನು ಮೊಬೈಲ್ ಮೂಲಕ ಚಿತ್ರೀಕರಿಸಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು. ಪತ್ರಿಕೆಗಳ ಮೂಲಕವೂ ಸಮಾಜದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಸಾಮಾಜಿಕ ಜಾಲತಾಣವನ್ನು ಉಪಯುಕ್ತ ಕಾರ್ಯಗಳಿಗೆ ಬಳಸುವ ಮೂಲಕ ಸೇವಾ ಮನೋಭಾವ ಹೊಂದಬೇಕು ಎಂದು ಹೇಳಿದರು. ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ಸೇವಾ ಮನೋಭಾವ ವೃದ್ಧಿಯಾಗುತ್ತದೆ. ಗ್ರಾಮೀಣ ಮತ್ತು ಪರಿಸರದ ಬಗ್ಗೆ ಕಾಳಜಿ, ಭಾವೈಕ್ಯತೆ ಮತ್ತು ನಾಯಕತ್ವದ ಗುಣ ಬೆಳೆಯುತ್ತದೆ. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವದ ಅಂತಂಕರಣ ತುಂಬಿದ ಪ್ರಜೆಗಳಾಗಿ ರೂಪುಗೊಳ್ಳಲು ಎನ್‌ಎಸ್‌ಎಸ್ ಸಹಕಾರಿಯಾಗುತ್ತದೆ ಎಂದು ನುಡಿದರು.

ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ಮಾತನಾಡಿ, ಇಂದಿನ ಯುವ ಜನರಲ್ಲಿ ಶಿಸ್ತು, ಏಕಾಗ್ರತೆ, ವಿಚಾರವಂತಿಕೆ, ಕುತೂಹಲ, ಉತ್ಸಾಹದ ಮನೋಭಾವದ ಕೊರತೆ ಅಗಾಧವಾಗಿದೆ. ಇದರಿಂದಾಗಿ ಯುವಜನರು ಒಂದೇ ಸೋಲಿಗೆ ಹತಾಶರಾಗುತ್ತಿದ್ದರೆ. ಮತ್ತೆ ಮತ್ತೆ ಪ್ರಯತ್ನ ಮಾಡುವ ಛಲ ಕಾಣುತ್ತಿಲ್ಲ ಎಂದು ವಿಷಾದಿಸಿದರು.

ಪ್ರತಿನಿತ್ಯ ಸಾಮಾಜಿಕ ಜಾಲತಾಣ ಬಳಸುವಾಗ ಯವಜನರು ತುಂಬಾ ಎಚ್ಚರಿಕೆಯಿಂದ ಬಳಸಬೇಕು. ಇಂದು ವಿಷಯ ಅಥವಾ ವಿಡಿಯೋವನ್ನು ‘ಫಾರ್ವರ್ಡ್’ ಮಾಡುವಾಗ ಅದರ ಸತ್ಯಾಸತ್ಯತೆ ಮತ್ತು ಸಾಮಾಜಿಕ ಉಪಯುಕ್ತತೆಯ ಪರಿಶೀಲಿಸಿ ‘ಫಾರ್ವರ್ಡ್’ ಮಾಡಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸಿಸುವ ವಿಚಾರಗಳನ್ನು ಯಾವುದೇ ಕಾರಣಕಕ್ಕೂ ಯಾರಿಗೂ ಹಂಚಬಾರದು ಎಂದು ಸಲಹೆ ನೀಡಿದರು.

ತಾಲೂಕು ಪಂಚಾಯತಿಯ ಮಾಜಿ ಸದಸ್ಯ ಮುದ್ದು ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಿ ನೀಲಮ್ಮ, ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ವೈ. ನಾಗರಾಜು, ಉಪನ್ಯಾಸಕ ಕಿರಣ್, ಶಿಬಿರದ ನಿರ್ದೇಶಕ ಎಸ್. ಆನಂದ್, ಸಹ ಶಿಬಿರಾಧಿಕಾರಿ ಸಿ. ಧರ್ಮೇಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net