ಸ್ನೇಹಿತರ ನಡುವೆ ಉಂಟಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

Crime Logo
Published on

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಉಂಟಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.
ಕೆ.ಜಿ.ಹಳ್ಳಿಯ ಬಾಗಲೂರು ಲೇಔಟ್ ನಿವಾಸಿ ಪ್ರವೀಣ್(೨೭) ಕೊಲೆಯಾದ ಯುವಕ. ಈ ಸಂಬಂಧ ಪ್ರವೀಣ್ ಸ್ನೇಹಿತರಾದ ಸುಂದರ್(೨೭), ಪ್ರಭು(೨೫) ಮತ್ತು ಆರುಮುಗಂ(೨೭) ಎಂಬುವರನ್ನು ಬಂಧಿಸಲಾಗಿದೆ.
ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಪ್ರವೀಣ್ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದು, ಒಂದೇ ಏರಿಯಾದವರಾಗಿದ್ದಾರೆ. ಮಂಗಳವಾರ ತಡರಾತ್ರಿ ೧೨ಗಂಟೆ ಸುಮಾರಿಗೆ ಲಿಂಗರಾಜಪುರದ ಆಯಿಲ್ ಮಿಲ್ ರಸ್ತೆಯಲ್ಲಿ ಎಲ್ಲರೂ ಮದ್ಯ ಸೇವಿಸಿ ಮಾತನಾಡುತ್ತ ನಿಂತಿದ್ದರು. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳವಾಗಿದೆ. ಈ ವೇಳೆ ಕೋಪಗೊಂಡ ಆರುಮುಗಂ ಹೆಲ್ಮೆಟ್‌ನಿಂದ ಪ್ರವೀಣ್ ತಲೆಗೆ ಹೊಡೆದಿದ್ದಾನೆ. ಅದೇ ವೇಳೆ ಇತರೆ ಆರೋಪಿಗಳು ಪ್ರವೀಣ್ ಮೇಲೆ ಹಲ್ಲೆ ನಡೆಸಿದ್ದಾರೆ. ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಪ್ರವೀಣ್ ಕುಸಿದು ಬಿದ್ದಿದ್ದಾನೆ. ಗಾಬರಿಗೊಂಡ ಆರೋಪಿಗಳು ಎಚ್ಚರಿಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ಪ್ರವೀಣ್ ಮೃತಪಟ್ಟಿದ್ದಾನೆ. ಬಳಿಕ ಆರೋಪಿಗಳು ಪರಾರಿಯಾಗ್ದಿದರು. ಕೆಲ ಹೊತ್ತಿನ ಬಳಿಕ ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರವೀಣ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಆರೋಪಿಗಳ ಪತ್ತೆ ಕಾರ್ಯ ಆರಂಭಿಸಿದ್ದರು. ಬುಧವಾರ ಮುಂಜಾನೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಣಸವಾಡಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net