

ಸಕಲೇಶಪುರ: ಹೇಮಾವತಿನಗರದಲ್ಲಿ ಕಾಂಕ್ರೀಟ್ ರಸ್ತೆಗಾಗಿ ಬಡಾವಣೆ ನಿವಾಸಿಗಳ ಮಧ್ಯೆ ಜಗಳ ನಡೆದು, ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪಟ್ಟಣದ ವಾರ್ಡ್ ನಂ.1ರ ಹೇಮಾವತಿನಗರ ಬಡಾವಣೆಯ 1ನೇ ಅಡ್ಡ ರಸ್ತೆ ಕಾಂಕ್ರೀಟಿಕರಣಕ್ಕಾಗಿ 10 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭಕ್ಕೆ ಬುಧವಾರ ಸಿದ್ಧತೆ ನಡೆಸಲಾಗುತ್ತಿತ್ತು.
ಈ ವೇಳೆ ಸ್ಥಳಕ್ಕೆ ಬಂದ 4ನೇ ಅಡ್ಡ ರಸ್ತೆಯ ನಿವಾಸಿಗಳು, ಬಡಾವಣೆಯ ಬಹುತೇಕ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಲಾಗಿದೆ. ಆದರೆ, ಹೆಚ್ಚು ಜನರು ವಾಸಿಸುವ 4ನೇ ಅಡ್ಡ ರಸ್ತೆ ಅಭಿವೃದ್ಧಿಗೊಳಿಸಲು ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡಲಾಗುತ್ತಿದೆ. ಪುರಸಭೆ ಅಧಿಕಾರಿಗಳು ಮತ್ತು ಸದಸ್ಯರು ಅಭಿವೃದ್ಧಿ ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
1ನೇ ಅಡ್ಡ ರಸ್ತೆಯೊಂದಿಗೆ 4ನೇ ಅಡ್ಡ ರಸ್ತೆಯನ್ನೂ ಅಭಿವೃದ್ಧಿಗೊಳಿಸಬೇಕು. ತಪ್ಪಿದಲ್ಲಿ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಇದರಿಂದ ಕೆರೆಳಿದ 1ನೇ ಅಡ್ಡ ರಸ್ತೆ ನಿವಾಸಿಗಳು, 4ನೇ ಅಡ್ಡ ರಸ್ತೆ ನಿವಾಸಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ಪರಿಣಾಮ ಕೆಲಕಾಲ ಉದ್ವಿಗ್ನತೆ ಸೃಷ್ಟಿಯಾಯಿತು. ಈ ವೇಳೆ ಸ್ಥಳಕ್ಕೆ ಬಂದ ಪೋಲಿಸರು ಕಾಮಗಾರಿ ಸ್ಥಗಿತಗೊಳಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.