

ದೇವದುರ್ಗ: ತಾಲೂಕಿನ ಜಾಲಹಳ್ಳಿ ಗ್ರಾಮದ ಬಾಂಬೆಯವರ ಪಾಳುಬಿದ್ದ ತೋಟದಲ್ಲಿ ಪ್ರತ್ಯಕ್ಷವಾಗಿದ್ದ ಹೆಬ್ಬಾವನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಬುಧವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ವಿಷಯ ತಿಳಿದು ವಲಯ ಅರಣ್ಯ ಅಧಿಕಾರಿ ಗಿರಿಯಪ್ಪ ಎಲಿಮನಿ ನೇತೃತ್ವದ ಸಿಬ್ಬಂದಿ ಬೆಳಗ್ಗೆ ಗ್ರಾಮಕ್ಕೆ ಭೇಟಿನೀಡಿ ಪರಿಶೀಲಿಸಿತು. ನಂತರ ಹಟ್ಟಿಯಿಂದ ಉರಗ ತಜ್ಞರನ್ನು ಕರೆಸಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಪಾಳುಬಿದ್ದ ತೋಟದಲ್ಲಿನ ಮುಳ್ಳು, ಜಾಲಿಗಿಡಗಳನ್ನು ಜೆಸಿಬಿಯಿಂದ ತೆರವು ಮಾಡಲಾಯಿತು. ಹೆಬ್ಬಾವು ಪತ್ತೆಹಚ್ಚಿ ಬಲೆಬೀಸಿ ಸೆರೆ ಹಿಡಿದಿದ್ದು ಅರಣ್ಯ ಇಲಾಖೆ ವಾಹನದಲ್ಲಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಸಿಬ್ಬಂದಿ ಪ್ರದೀಪ್, ಈಶ್ವರ ಇದ್ದರು.
ನಿಟ್ಟುಸಿರು ಬಿಟ್ಟ ಜನರು: ಹೆಬ್ಬಾವು ಸೆರೆಹಿಡಿದ ಕಾರಣ ಗ್ರಾಮಸ್ಥರು, ಕೂಲಿಕಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹೆಬ್ಬಾವು ಸೆರೆ ಹಿಡಿದ ನಂತರ ಯುವಕರು ಸೆಲ್ಫಿಗಾಗಿ ಮುಗಿಬಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ, ಉರಗ ತಜ್ಞರ ಜತೆ ಯುವಕರು ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹೆಬ್ಬಾವು ಸೆರೆ ಹಿಡಿದಿದ್ದರಿಂದ ನಾಲ್ಕೈದು ದಿನಗಳಿಂದ ಮನೆ ಮಾಡಿದ್ದ ಆತಂಕ ದೂರವಾಗಿದೆ.