

ಮುಂಡಗೋಡ: ಗದ್ದೆಯ ಬೇಲಿಯಲ್ಲಿ ಹಾಕಿದ್ದ ಬಲೆಯಲ್ಲಿ 12ಅಡಿ ಉದ್ದದ ಹೆಬ್ಬಾವು ಸಿಲುಕಿಕೊಂಡಿದ್ದನ್ನು ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ ಹೊನ್ನಾವರ ರಕ್ಷಣೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆ ಗುರುವಾರ ಜರುಗಿದೆ.
ತಾಲೂಕಿನ ಚಿಗಳ್ಳಿ ಗ್ರಾಮದ ಮಲ್ಲೇಶಪ್ಪ ಎಂಬುವರು ಗದ್ದೆಯ ಸುತ್ತಲು ಬೇಲಿ ಹಾಕಿದ್ದು ಸಣ್ಣ ಪುಟ್ಟ ಪ್ರಾಣಿಗಳು ಗದ್ದೆಯೊಳಗೆ ನುಗ್ಗದಿರಲಿ ಎಂದು ಬೇಲಿಯ ಜತೆಗೆ ಬಲೆಯನ್ನು ಸಹ ಹಾಕಿದ್ದಾರೆ. ಹೀಗೆ ಹಾಕಿರುವ ಬೇಲಿಗೆ ಹೆಬ್ಬಾವು ಸಿಲುಕಿಕೊಂಡು ಸಾವು ಬದುಕಿನ ಮಧ್ಯ ಹೋರಾಡುತ್ತಿತ್ತು. ಇದನ್ನು ಕಂಡ ಗದ್ದೆಯ ಮಾಲೀಕ ತಕ್ಷಣ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಕಾತೂರ ಉಪವಲಯ ಅರಣ್ಯಾಧಿಕಾರಿ ಸುನೀಲ ಹೊನ್ನಾವರ ಚಿಗಳ್ಳಿ ಬಲೆಯಲ್ಲಿ ಸಿಲುಕಿದ್ದ ಹಾವನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಇದೂ ಹನ್ನೆರಡು ಅಡಿ ಉದ್ದ ಹಾಗೂ ಐವತ್ತು ಕೆಜಿ ತೂಕದ ಹೆಬ್ಬಾವು ಆಗಿದೆ ಎಂದು ಸುನೀಲ ಹೊನ್ನಾವರ ತಿಳಿಸಿದ್ದಾರೆ.