ಕರ್ನಾಟಕದಲ್ಲಿ ಅಪರೂಪದ ನೇರಳೆ ಬಣ್ಣದ ಏಡಿ ಪತ್ತೆ

purple colore crab
Published on

| ಭರತ್ ಶೆಟ್ಟಿಗಾರ್ ಮಂಗಳೂರು

ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಲಯದ ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಅತಿ ವಿರಳ ನೇರಳೆ ಬಣ್ಣದ ಏಡಿ ಪ್ರಭೇದ ಪತ್ತೆಯಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ, ಬಂಟ್ವಾಳ ಎಸ್​ವಿಎಸ್ ಕಾಲೇಜು ಉಪನ್ಯಾಸಕ ಸುಪ್ರೀತ್ ಕಡಕೋಳ್ ಅವರ ತಂಡಕ್ಕೆ ಸೆ.11ರಂದು ರಸ್ತೆ ಬದಿ ಏಡಿ ಕಾಣಸಿಕ್ಕಿದೆ.

ಮೊದಲ ಬಾರಿಗೆ ನೇರಳೆ ಬಣ್ಣದ ಏಡಿಯನ್ನು ಮಹಾರಾಷ್ಟ್ರದ ಅಂಬೋಲಿಯಲ್ಲಿ ಮರದ ಪೊಟರೆಯ ನೀರಿನಲ್ಲಿ 2015ರಲ್ಲಿ ಪತ್ತೆಯಾಗಿತ್ತು. 2017ರಲ್ಲಿ ರಾಜ್ಯದ ಸಾಗರ ತಾಲೂಕಿನ ಶರಾವತಿ ನದಿ ಕಣಿವೆ ಪ್ರದೇಶದಲ್ಲಿ ಸಿಕ್ಕಿತ್ತು. ಬಳಿಕ ಎಲ್ಲೂ ಪತ್ತೆಯಾಗಿರುವ ಮಾಹಿತಿ ಇಲ್ಲ.

ಮಳೆಗಾಲದಲ್ಲಿ ಓಡಾಟ: ಮಳೆಗಾಲದಲ್ಲಿ ಮಾತ್ರ ಹೊರಬರುವ ಸಿಹಿನೀರಿನ ಈ ಏಡಿಗಳು ಬೇಸಿಗೆಯಲ್ಲಿ ತಂಪಾದ ಜಾಗದಲ್ಲಿ ಅವಿತಿರುತ್ತವೆ. ಮಾಫೋಮೆಟ್ರಿಕ್ ಅನಾಲಿಸಿಸ್ ಪ್ರಕಾರ ಇದು ಘಾಟಿಯಾನಾ ತಳಿಗೆ ಸೇರಿದ್ದು ಎಂಬ ಪ್ರಾಥಮಿಕ ಮಾಹಿತಿ ಲಭಿಸಿದೆ. ಅದೇ ಪ್ರಭೇದವೇ ಅಥವಾ ವಿಭಿನ್ನವೇ ಎಂಬ ಕುರಿತು ವಿವಿ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದಿಂದ ಹೆಚ್ಚಿನ ಅಧ್ಯಯನ ಕೈಗೊಳ್ಳಲು ನಿರ್ಧರಿಸಲಾಗಿದೆ.

ಜೇಡಗಳ ಮೇಲಿನ ಸಂಶೋಧನಾ ಉದ್ದೇಶದಿಂದ ಕಾರವಾರಕ್ಕೆ ತೆರಳಿದ್ದಾಗ ಏಡಿ ಪತ್ತೆಯಾಗಿದೆ. ವಿಶೇಷ ಪ್ರಭೇದ ಆಗಿರುವುದರಿಂದ ಅಧ್ಯಯನ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯಕ್ಕೆ ಒಪ್ಪಿಸಿದ್ದೇವೆ.

| ಸುಪ್ರೀತ್ ಕಡಕೋಳ್ ಮಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿ

ವಿವಿ ಪ್ರಯೋಗಾಲಯದಲ್ಲಿ ಅಧ್ಯಯನ ಆರಂಭವಾಗಿದೆ. ವಿಭಿನ್ನ ಜಾತಿಗೆ ಸೇರಿದ ಏಡಿಯಾಗಿದ್ದರೆ ಹೊಸ ಅನ್ವೇಷಣೆಯಾಗಲಿದೆ. ನವೆಂಬರ್​ನಲ್ಲಿ ವರದಿ ಸಿಗಬಹುದು. ಆ ಪ್ರದೇಶದಲ್ಲಿ ನಾಲ್ಕು ಏಡಿಗಳು ಪತ್ತೆಯಾಗಿದ್ದು, ಇನ್ನೂ ಇದೆಯೇ ಎಂದು ಪತ್ತೆ ಹಚ್ಚಲಾಗುವುದು.

| ಡಾ.ಎಂ.ಎಸ್.ಮುಷ್ತಾಕ್ 

ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ ಪ್ರಾಧ್ಯಾಪಕ, ಮಂಗಳೂರು ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net