ಮದ್ವೆ ಆಹ್ವಾನ ಪತ್ರಿಕೆಯಲ್ಲೂ ಅಪ್ಪುಗೆ ನಮನ: ಬಾಗಲಕೋಟೆ ಜೋಡಿಯ ಅಭಿಮಾನ ಕಂಡು ಭಾವುಕರಾದ ಅಪ್ಪು ಫ್ಯಾನ್ಸ್​

puneeth (3)
Published on

ಬಾಗಲಕೋಟೆ: ನಟ ಪುನೀತ್​ ರಾಜ್​ಕುಮಾರ್​ ನಿಧನರಾಗಿ ಒಂದೂವರೆ ತಿಂಗಳು ಕಳೆದರೂ ಅವರ ಮೇಲೆ ಜನರಿಗಿರುವ ಅಭಿಮಾನ ಕಿಂಚಿತ್ತೂ ಕರಗಿಲ್ಲ. ಪ್ರೀತಿಯ ಅಪ್ಪು ಇಲ್ಲವಾದರೂ ಅವರ ನೆನಪಿನ ಬುತ್ತಿಯ ಗಾತ್ರ ಹೆಚ್ಚುತ್ತಲೇ ಇದೆ. ಅಪ್ಪುಗಾಗಿ ಕನ್ನಡಿಗರ ಮನ ಮಿಡಿಯುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ. ಇಲ್ಲೊಂದು ಜೋಡಿ ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಅಪ್ಪುಗೆ ನಮಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೊಸೂರು ಗ್ರಾಮದಲ್ಲಿ‌ ಶ್ರೀಧರ ಹಾಗೂ ಸವಿತಾ ಎಂಬುವರ ಮದುವೆ ಡಿ. 27ರಂದು ನಡೆಯಲಿದೆ. ಇವರಿಬ್ಬರು ಲಗ್ನಪತ್ರಿಕೆಯಲ್ಲಿ ಪುನೀತ್ ರಾಜ್​ಕುಮಾರ್​ ಫೋಟೋ ಜೊತೆಗೆ "ಜೊತೆಗಿರುವ ಜೀವ ಎಂದೆಂದಿಗೂ ಜೀವಂತ. ಅಪ್ಪು ಅಮರ" ಎಂಬ ಬರಹವನ್ನು ಲಗ್ನ ಪತ್ರಿಕೆಯಲ್ಲಿ ಹಾಕಿಸಿಕೊಂಡಿದ್ದಾರೆ.

ಸವಿತಾ ಬಾಗಲಕೋಟೆ ತಾಲೂಕಿನ ಕಿರಸೂರು ಗ್ರಾಮದ ನಿವಾಸಿ. ಶ್ರೀಧರ ಹೊಸೂರು ಗ್ರಾಮದವ. ಈ ಜೋಡಿ ಹಾಗೂ ಎರಡು ಮನೆಯವರಿಗೆ ಪುನೀತ್ ಕಂಡರೆ ಅತೀವ ಪ್ರೀತಿ. ಪುನೀತ್ ಅಗಲಿಕೆಯಿಂದ ತುಂಬಾ ನೊಂದುಕೊಂಡಿದ್ದ ಈ ಕುಟುಂಬಗಳು, ಮಕ್ಕಳ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಪುನೀತ್ ಫೋಟೋ ಹಾಕಿಸಿದ್ದಾರೆ. ಅಷ್ಟೇ ಅಲ್ಲ, 'ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ' ಎಂದು ವಿಶೇಷ ಸೂಚನೆ ಕೊಡುವ ಮೂಲಕ ಕೋವಿಡ್ ನಿಯಮ ಪಾಲಿಸುವಂತೆ ಮನವಿ ಮಾಡಿದೆ. ಇವರಿಬ್ಬರ ಲಗ್ನಪತ್ರಿಕೆಯ ಫೋಟೋ ವೈರಲ್​ ಆಗಿದ್ದು, ಅಪ್ಪುಗೆ ನಮನ ಸಲ್ಲಿಸಿದ ಪರಿ ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net