ಪುನೀತ್​ ಭೂತಾಯಿ ಮಡಿಲು ಸೇರುತ್ತಿದ್ದಂತೆ ಅಭಿಮಾನಿಯೊಬ್ಬ 'ಅಪ್ಪು ತರ ನನ್ನ ಕಣ್ಣನ್ನೂ ದಾನ ಮಾಡಿ' ಎಂದೇಳಿ ಆತ್ಮಹತ್ಯೆ

anekal punith fans
Published on

ಆನೇಕಲ್: ನಟ ಪುನೀತ್​ ರಾಜ್​ಕುಮಾರ್​ ಅವರ ನಿಧನ ಕರುನಾಡಲ್ಲಿ ಕಣ್ಣೀರ ಕೋಡಿಯನ್ನೇ ಹರಿಸಿದೆ. ನಮ್ಮೆಲ್ಲರ ಪ್ರೀತಿಯ ಅಪ್ಪು ಮಣ್ಣಲ್ಲಿ ಲೀನವಾದರೂ ಅಭಿಮಾನಿಗಳ ದುಃಖ ಮಾತ್ರ ಕೊಂಚವೂ ಕಡಿಮೆ ಆಗಿಲ್ಲ. ಪುನೀತ್​ರ ಅಂತ್ಯಸಂಸ್ಕಾರ ನಡೆಯುವ ಮುನ್ನವೇ ಐವರು ಅಭಿಮಾನಿಗಳು ದುರಂತ ಅಂತ್ಯಕಂಡಿದ್ದರು. ಈ ವಿಚಾರ ತಿಳಿದು ತುಂಬಾ ನೊಂದುಕೊಂಡ ಶಿವರಾಜ್​ಕುಮಾರ್​ ಅವರು, ಅಪ್ಪುವಿನ ಅಂತ್ಯಸಂಸ್ಕಾರ ಮುಗಿಯುತ್ತಿದ್ದಂತೆ, 'ಅಭಿಮಾನಿಗಳೇ ದಯವಿಟ್ಟು ದುಡುಕಬೇಡಿ. ಅಪ್ಪು ಇಂತಹದ್ದನ್ನು ಎಂದೂ ಬಯಸಲ್ಲ' ಎಂದು ಕೈಮುಗಿದು ಮನವಿ ಮಾಡಿಕೊಂಡಿದ್ದರು. ಇಷ್ಟೆಲ್ಲ ಬೆಳವಣಿಗೆ ಬಳಿಕ ಆನೇಕಲ್​ನಲ್ಲಿ ಅಭಿಮಾನಿಯೊಬ್ಬ 'ಪುನೀತ್‌ರಂತೆ ನನ್ನ ಕಣ್ಣುಗಳನ್ನು ದಾನ ಮಾಡಿ' ಎಂದು ಸಾವಿಗೆ ಶರಣಾಗಿದ್ದಾನೆ.

ಬನ್ನೇರುಘಟ್ಟ ಸಮೀಪದ ಶ್ಯಾನುಭೋಗನಹಳ್ಳಿಯ ರಾಜೇಂದ್ರ(40) ಮೃತರು. ಪುನೀತ್​ರ ಕಟ್ಟಾ ಅಭಿಮಾನಿಯಾಗಿದ್ದ ರಾಜೇಂದ್ರ, ಪುನೀತ್​ರ ಸಾವಿನಿಂದ ಕಂಗಾಲಾಗಿದ್ದ. ಕಂಠೀರವ ಸ್ಟುಡಿಯೋದಲ್ಲಿ ಪುನೀತ್​ ಭೂತಾಯಿಯ ಮಡಿಲು ಸೇರುತ್ತಿದ್ದಂತೆ, ಅತ್ತ ರಾಜೇಂದ್ರ ಕಣ್ಣುದಾನ ಕುರಿತು ತನ್ನ ತಾಯಿಯೊಂದಿಗೆ ಪ್ರಸ್ತಾಪಿಸಿದ್ದ. ಪುನೀತ್​ ಅವರು ನೇತ್ರದಾನ ಮಾಡಿದ್ದರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದ. ತಾನು ಸತ್ತ ಮೇಲೆ ಪುನೀತ್​ರಂತೆ ನನ್ನ ಕಣ್ಣನ್ನೂ ದಾನ ಮಾಡಿ ಎಂದು ಮನೆಯವರಿಗೆ ಹೇಳಿದ್ದ. ಕೆಲ ಸಮಯದ ಬಳಿಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನ ಆಸೆಯಂತೆ ರಾಜೇಂದ್ರನ ಕಣ್ಣುಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ರಾಜೇಂದ್ರ ಒಂದು ವರ್ಷದ ಹಿಂದಷ್ಟೇ ಮದುವೆ ಆಗಿದ್ದ. ಬನ್ನೇರುಘಟ್ಟ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪ್ಪು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳಬಾರದು. ಅಪ್ಪು ಇಂತಹದ್ದನ್ನು ಎಂದೂ ಬಯಸಲ್ಲ. ನಮಗೂ ಅಪ್ಪು ಮೇಲೆ ಪ್ರೀತಿ ಇದೆ ಅಲ್ವಾ? ಹಾಗಾಂತ ಆತ್ಮಹತ್ಯೆ ಮಾಡಿಕೊಳ್ಳಬಾರದು. ನಿಮ್ಮ ಕುಟುಂಬಕ್ಕೆ ನಿಮ್ಮ ಅಗತ್ಯತೆ ಇದೆ, ಅರ್ಥ ಮಾಡಿಕೊಳ್ಳಿ. ಅಪ್ಪಾಜಿ ನಿಧನದ ಸಮಯದಲ್ಲಿ ತುಂಬಾ ಕಷ್ಟವಾಗಿತ್ತು. ಎಲ್ಲರಿಗಿಂತ ಹೆಚ್ಚಾಗಿ ಅಪ್ಪು ನಿಮ್ಮ ಹೃದಯದಲ್ಲಿ ಇದ್ದಾನೆ. ದಯವಿಟ್ಟು ಅಭಿಮಾನಿಗಳು ದುಡುಕಬೇಡಿ ಎಂದು ಶಿವರಾಜ್​ಕುಮಾರ್​ ಕೈಮುಗಿದು ಮನವಿ ಮಾಡಿಕೊಂಡಿದ್ದರು. ಆದರೂ ರಾಜೇಂದ್ರ ಅಂತ್ಯಕಂಡದ್ದು ದುರಂತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net