

ಮಡಿಕೇರಿ: ಮಡಿಕೇರಿ ನಗರಸಭೆಯ ೧೪ನೇ ವಾರ್ಡ್ ಸದಸ್ಯೆ ಉಷಾ ಅವರಿಗೆ ಅಧ್ಯಕ್ಷ ಸ್ಥಾನ ಕೈತಪ್ಪಿರುವುದಕ್ಕೆ ಜನಪ್ರತಿಧಿಯೊಬ್ಬರು ಕಾರಣ ಎಂದು ಉಷಾ ಅವರ ಪತಿ ಎಂ.ಕೆ.ಕಾವೇರಪ್ಪ ಗಂಭೀರ ಆರೋಪ ಮಾಡಿದರು.
ಇತ್ತೀಚೆಗೆ ನಡೆದ ಮಡಿಕೇರಿ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆ ಸಂದರ್ಭ ನನ್ನ ಪತ್ನಿ ಉಷಾ ಅವರಿಗೆ ಅನ್ಯಾಯವಾಗಿದೆ ಎನ್ನುವುದು ಹಲವರ ಅಭಿಪ್ರಾಯ. ಆದರೆ, ನನ್ನ ಪ್ರಕಾರ ನನ್ನ ಪತ್ನಿಗೆ ಅನ್ಯಾಯವಾಗಿಲ್ಲ. ಬದಲಿಗೆ ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತಕ್ಕೆ ಅನ್ಯಾಯವಾಗಿದೆ ಎಂದ ಅವರು, ನನ್ನ ಪತ್ನಿ ಉಷಾ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ಆಂತರಿಕ ಚುನಾವಣೆಯಲ್ಲಿ ಉಷಾ ಅವರನ್ನು ಕೂಡ ಕಣದಲ್ಲಿರುವಂತೆ ನೋಡಿಕೊಳ್ಳಲಾಯಿತು. ಪಕ್ಷದ ವರಿಷ್ಠರಿಗೆ ಗೌರವ ನೀಡಿ ಉಷಾ ಅವರು ನಗರಸಭೆಯ ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸಿದರು. ಸ್ಪರ್ಧೆಯಲ್ಲಿ ಉಷಾ ಅವರು ಅತ್ಯಧಿಕ ಮತಗಳನ್ನುಗಳಿಸಿ ಅಧ್ಯಕ್ಷರಾಗುವುದು ಖಚಿತವಾಗಿತ್ತು. ಆದರೆ, ಜನಪ್ರತಿಧಿಯೊಬ್ಬರು ಕೊನೆಯ ಗಳಿಗೆಯಲ್ಲಿ ನಡೆಸಿದ ಷಡ್ಯಂತ್ರದಿಂದಾಗಿ ಉಷಾ ಅವರು ಅಧ್ಯಕ್ಷ ಸ್ಥಾನದಿಂದ ವಂಚಿತರಾದರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಇನ್ನು ಮುಂದೆಯೂ ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದ ಅವರು, ಮುಂದೆ ಯಾರಿಗೂ ಈ ರೀತಿಯ ಅನ್ಯಾಯ ಆಗಬಾರದು ಎಂದ ಅವರು, ಪಕ್ಷದೊಳಗಿನ ಹಿರಿಯರೊಬ್ಬರು ದ್ವೇಷ ರಾಜಕಾರಣ ಮಾಡಿದ್ದು, ಮತದಾನದ ಮಹತ್ವವನ್ನು ಕಡೆಗಣಿಸಿ, ಬಿಜೆಪಿ ಸಿದ್ಧಾಂತವನ್ನು ಗಾಳಿಗೆ ತೂರಿದ್ದಾರೆ ಎಂದು ದೂರಿದರು.
ಪತ್ನಿ ಉಷಾ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲದಿದ್ದರೂ ಒತ್ತಡದಿಂದ ಚುನಾವಣಾ ಕಣಕ್ಕಳಿಸಿ ಇದೀಗ ಅವಮಾನ ಮಾಡಲಾಗಿದೆ. ಕೊನೆಯ ಕ್ಷಣದಲ್ಲಿ ಪಕ್ಷದ ವರಿಷ್ಠರು ತೆಗೆದುಕೊಂಡ ನಿರ್ಧಾರದಿಂದ ನಮಗೆ ಆಘಾತವಾಗಿದೆ. ಈ ರೀತಿಯ ಬೆಳವಣಿಗೆಗಳು ನಡೆಯುವುದಾದರೆ ಆಂತರಿಕ ಚುನಾವಣೆಯ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
ಹಿರಿಯರು ಮಾಡುವ ತಪ್ಪಿನಿಂದ ಬಿಜೆಪಿಗೆ ಮುಜುಗರವಾಗಬಾರದು ಅಥವಾ ಪಕ್ಷದ ಬೆಳವಣಿಗೆಗೆ ಹಿನ್ನಡೆಯಾಗಬಾರದು ಎನ್ನುವ ಸದುದ್ದೇಶದಿಂದ ನನ್ನ ಬೇಸರವನ್ನು ವ್ಯಕ್ತಪಡಿಸುತ್ತಿದ್ದೇನೆ ಎಂದ ಕಾವೇರಪ್ಪ, ನಗರಸಭೆಗೆ ನೂತನವಾಗಿ ಆಯ್ಕೆಯಾಗಿರುವರಿಬ್ಬರೂ ನಮಗೆ ಆತ್ಮೀಯರಾಗಿದ್ದು, ಅಭಿವೃದ್ಧಿಯ ವಿಚಾರದಲ್ಲಿ ನಮಗೆ ಸಂಪೂರ್ಣ ಸಹಕಾರ ದೊರೆಯುತ್ತದೆ ಎನ್ನುವ ವಿಶ್ವಾಸವಿದೆ. ಸದಸ್ಯರಾದ ಉಷಾ ಅವರು ಕೂಡ ಕಲಾವತಿ ಹಾಗೂ ಮಹೇಶ್ ಜೈನಿ ಅವರಿಗೆ ಸಂಪೂರ್ಣ ಸಹಕಾರ ನೀಡಲಿದ್ದು, ಅಭಿವೃದ್ಧಿ ಕಾರ್ಯಗಳೊಂದಿಗೆ ಕೈಜೋಡಿಸಲಿದ್ದಾರೆ ಎಂದರು.
ಪತ್ನಿ ವಿದ್ಯಾವಂತೆಯಾದರೂ ರಾಜಕೀಯದಲ್ಲಿ ಹೆಚ್ಚಿನ ಅರಿವಿಲ್ಲದ ಕಾರಣ ವಾರ್ಡ್ ಕೆಲಸಗಳನ್ನು ನಾನೇ ಮಾಡಿಸುತ್ತಿದ್ದೆ. ಇದುವರೆಗೂ ನಗರಸಭೆಯ ಯಾವುದೇ ಕೆಲಸ ಕಾರ್ಯಗಳಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ಬ್ರಷ್ಟಾಚಾರ ಮಾಡಿಲ್ಲ. ನಿಷ್ಠೆಯಿಂದ ಕೆಲಸ ನಿರ್ವಹಿಸಿದ್ದೇನೆ. ಪತ್ನಿ ಅಧ್ಯಕ್ಷರಾದ ಬಳಿಕ ನಗರಸಭೆಯಲ್ಲಿ ಉತ್ತಮ ಆಡಳಿತ ನೀಡುವ ಕನಸಿತ್ತು. ಆದರೆ, ಪಕ್ಷದಿಂದ ಆಸೆ ತೋರಿಸಿ ಇದೀಗ ಸ್ಲೋ ಪಾಯ್ಸನ್ ಕೊಟ್ಟಿದ್ದಾರೆಂದು ನೊಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ೧೪ನೇ ವಾರ್ಡ್‌ನ ನಿವಾಸಿ ಉತ್ತಮ್ ಇದ್ದರು.