

ರಾಮನಗರ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಬಗೆದಷ್ಟೂ ಆಳ ಎಂಬಂತೆ ಸ್ಫೋಟಕ ರಹಸ್ಯ ಬಯಲಾಗುತ್ತಲೇ ಇದೆ. ಇದೀಗ ಐಪಿಎಸ್ ಅಧಿಕಾರಿ ಕಮಲ್ ಪಂತ್ ಹೆಸರನ್ನು ಪ್ರಸ್ತಾಪಿಸುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದು, ಭಾರೀ ಸಂಚಲನ ಹುಟ್ಟುಹಾಕಿದೆ.
ಚನ್ನಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ಪಿಎಸ್ಐ ಹಗರಣವನ್ನು ಬಯಲು ಮಾಡಿದ್ದು ಸರ್ಕಾರವಲ್ಲ. ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆ ಆಗಿದೆ. ಚಾಮರಾಜಪೇಟೆಯಲ್ಲಿ ನಡೆದ ಘಟನೆಗೂ ಇದಕ್ಕೂ ದೊಡ್ಡ ಕಥೆ ಇದೆ. ಇಲ್ಲಿ ನಡೆದ ಕೊಲೆಯ ವಿಚಾರವಾಗಿ ಬಿಜೆಪಿಯ ವಕ್ತಾರನೊಬ್ಬ ಕಮಲ್ ಪಂತ್ ವಿರುದ್ಧ ಆರೋಪ ಮಾಡಿದ್ದರು. ಪೊಲೀಸ್ ಇಲಾಖೆಯು ಇದು ಆಕ್ಸಿಡೆಂಟ್ ಎಂದು ಹೇಳಿತ್ತು. ಆದರೆ ಬಿಜೆಪಿ ನಾಯಕರು ಉರ್ದು ವಿಚಾರವಾಗಿ ಗಲಾಟೆಯಾಗಿ ಕೊಲೆಯಾಯ್ತು ಎಂದು ಕಥೆ ಕಟ್ಟಿದ್ದರು. ನಿಷ್ಠಾವಂತ ಪೊಲೀಸ್ ಅಧಿಕಾರಿ ಮೇಲೆ ಆರೋಪ ಮಾಡಿದ್ದ ಬಿಜೆಪಿಯ ಆ ವ್ಯಕ್ತಿಗೆ ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ಕಲಬುರ್ಗಿಯಲ್ಲಿ ಅರೆಸ್ಟ್ ಆಗಿರುವವರ ಲಿಂಕ್ ಇತ್ತು. ಪೊಲೀಸ್ ಇಲಾಖೆಯ ಪ್ರಾಮಾಣಿಕ ಅಧಿಕಾರಿ ಕಮಲ್ ಪಂತ್ಗೆ ಅವಮಾನ ಮಾಡದಿದ್ದರೆ ಈ ವಿಚಾರ ಹೊರ ಬರುತ್ತಿರಲಿಲ್ಲ. ಇದರ ಹಿಂದೆ ದೊಡ್ಡ ಕಥೆಯೇ ಇದೆ. ಸರ್ಕಾರಕ್ಕೆ ಬುದ್ಧಿ ಕಲಿಸಲು ಕಮಲ್ ಪಂತ್ ಅವರ ಅಭಿಮಾನಿಗಳೇ ಹೊರ ತೆಗೆದಿದ್ದಾರೆ ಎಂದರು.
ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಕಾಂಗ್ರೆಸ್ ಬಳಿ ದಾಖಲೆ ಎಲ್ಲಿದೆ? ಅಶ್ವಥ್ ನಾರಾಯಣ್ ವಿರುದ್ಧ ಅವರ ಜೊತೆಯಲ್ಲಿದ್ದವರೇ ಮಾಧ್ಯಮಕ್ಕೆ ಮಾಹಿತಿ ಕೊಟ್ಟರು. ಅಮಿತ್ ಷಾ ರಾಜಯಕ್ಕೆ ಬರುವ ಸಂದರ್ಭದಲ್ಲಿ ಇದನ್ನ ಎಕ್ಸ್ಪೋಸ್ ಮಾಡಲು ಅವರೇ ಅಶ್ವಥ್ರ ಹೆಸರನ್ನು ಹೊರತೆಗೆದಿದ್ದಾರೆ. ಅಮಿತ್ ಷಾ ತಲೆಗೆ ಹೋಗಲಿ ಎಂದು ಅಶ್ವಥ್ ನಾರಾಯಣ್ರ ವಿರುದ್ಧ ಮಾಹಿತಿ ನೀಡಿದ್ದಾರೆ. ಇವರ ವಿಕೆಟ್ ಉರುಳಿಸಲು ಬಿಜೆಪಿಯಲ್ಲೇ ಹುನ್ನಾರ ನಡೆದಿದೆ. ಬಿಜೆಪಿ ಮನೆಗೆ ಬಿಜೆಪಿಯವರೇ ಬೆಂಕಿ ಹಚ್ಚಿಕೊಳ್ಳುತ್ತಿದ್ದಾರೆ, ನಾವು ಹಚ್ಚಬೇಕಿಲ್ಲ ಎಂದ ಎಚ್ಡೊಕೆ, ಕಾಂಗ್ರೆಸ್ನವರಿಗೆ ರಿಯಲ್ ಇಶ್ಯೂ ಮೇಲೆ ಹೋರಾಟ ಮಾಡುವ ಶಕ್ತಿಯಿಲ್ಲ. ಯಾರೋ ಹೇಳಿದನ್ನ ಹೇಳ್ಕೋತ್ತಾರೆ ಅಷ್ಟೆ. ಕಮಲ್ ಪಂತ್ಗೆ ಅವಮಾನ ಮಾಡದಿದ್ದರೆ ಈ ಅಕ್ರಮ ಬಯಲಾಗುತ್ತಿರಲಿಲ್ಲ. ಎಲ್ಲರೂ ದುಡ್ಡು ಕೊಟ್ಟು ಆಯ್ಕೆ ಆಗಿದ್ದಾರೆ ಎನ್ನಲು ಆಗಲ್ಲ. ಶೇ.30-40 ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರಬಹುದು. ಯಾರೇ ಆಗಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದರು.